
ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 9, ಮಂಗಳವಾರ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾದ ಪ್ಲೇಯಿಂಗ್ 11 (India Probable XI) ಹೇಗಿರಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಏಕೆಂದರೆ ಪ್ರತಿಯೊಂದು ಕ್ರಮಾಂಕಕ್ಕೂ ಇಬ್ಬಿಬ್ಬರು ಆಟಗಾರರು ಸ್ಪರ್ಧೆಯಲಿದ್ದಾರೆ. ಅಲ್ಲದೆ ಕೆಲವರು ಇಂಜುರಿಯಿಂದ ತಂಡಕ್ಕೆ ವಾಪಸ್ಸಾಗಿದ್ದು, ಅವರಿಗೆ ಸ್ಥಾನ ಕೊಡುವ ಸಲುವಾಗಿ ಕೆಲವರು ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕಾಗಿದೆ.
ಇನ್ನು ತಂಡದ ಆಡುವ 11 ಹೇಗಿರಲಿದೆ ಎಂಬುದನ್ನು ನೋಡುವುದಾದರೆ.. ಉಪನಾಯಕ ಶುಭ್ಮನ್ ಗಿಲ್ ಕುತ್ತಿಗೆ ನೋವಿನಿಂದ ಚೇತರಿಸಿಕೊಂಡಿದ್ದು, ಈಗ ಮತ್ತೆ ತಂಡಕ್ಕೆ ಮರಳಲಿದ್ದಾರೆ. ಕಟಕ್ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಅವರು ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಕ್ರಮವಾಗಿ 3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡುವುದು ಖಚಿತವಾಗಿದೆ. ಹಾರ್ದಿಕ್ ಜೊತೆಗೆ, ಆಡುವ ಹನ್ನೊಂದರಲ್ಲಿ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರಂತಹ ಸಮರ್ಥ ಆಲ್‌ರೌಂಡರ್‌ಗಳು ಸಹ ಇರುತ್ತಾರೆ.
ಭಾರತ ತಂಡವು ಜಿತೇಶ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ನಡುವೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಪೈಪೋಟಿ ಇದೆ. ಆಸ್ಟ್ರೇಲಿಯಾ ಪ್ರವಾಸದ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಜಿತೇಶ್ ಶರ್ಮಾ ಅವರನ್ನು ಈ ಜವಾಬ್ದಾರಿಗೆ ಆಯ್ಕೆ ಮಾಡಲಾಗಿತ್ತು . ಆದ್ದರಿಂದ ಅವರು ಕಟಕ್ ಟಿ20ಯಲ್ಲೂ ವಿಕೆಟ್ ಕೀಪರ್ ಆಗಿ ಪ್ರಾರಂಭಿಸುವ ಸಾಧ್ಯತೆಯಿದೆ. ಆದಾಗ್ಯೂ, ತಂಡವು ಅನುಭವದ ಆಧಾರದ ಮೇಲೆ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡಿದರೆ, ಸಂಜು ಅವರನ್ನು ಪರಿಗಣಿಸಬಹುದು.
IND vs SA: ಕಟಕ್‌ನಲ್ಲಿ ಮೊದಲ ಟಿ20; ಪಿಚ್ ಯಾರಿಗೆ ಸಹಕಾರಿ? ಪಂದ್ಯಕ್ಕೆ ಮಳೆ ಅಡ್ಡಿ?
ಇನ್ನು ತಂಡದ ಬೌಲಿಂಗ್ ವಿಭಾಗದಲ್ಲಿ ಮೂವರು ಪ್ರಮುಖ ಬೌಲರ್‌ಗಳು ಇರಲಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗದ ಜವಾಬ್ದಾರಿಯನ್ನು ವಹಿಸಿಕೊಂಡರೆ, ವರುಣ್ ಚಕ್ರವರ್ತಿ ಸ್ಪಿನ್ನರ್ ಆಗಿ ಕಣಕ್ಕಿಳಿಯಲಿದ್ದಾರೆ. ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಬೌಲರ್‌ಗಳಾಗಿರುತ್ತಾರೆ. ಅಗತ್ಯವಿದ್ದರೆ ಶಿವಂ ದುಬೆ ಆರನೇ ಬೌಲರ್ ಆಗಿಯೂ ಸ್ಥಾನ ಪಡೆಯಬಹುದು.
ಭಾರತದ ಸಂಭಾವ್ಯ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ