ರೋ-ಕೊ ಜೋಡಿ ಟೀಂ ಇಂಡಿಯಾ ಪರ ಮತ್ತೆ ಕಣಕ್ಕಿಳಿಯುವುದು ಯಾವಾಗ? ದಿನಾಂಕ ಪ್ರಕಟ
Virat Kohli Rohit Sharma next match: ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 2-1 ಏಕದಿನ ಸರಣಿ ಗೆದ್ದಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಟಿ20 ಮತ್ತು ಟೆಸ್ಟ್‌ನಿಂದ ನಿವೃತ್ತರಾಗಿರುವ ಈ ಜೋಡಿ ಮುಂದಿನ ಸರಣಿಯಲ್ಲಿ ಯಾವಾಗ ಆಡುತ್ತಾರೆ ಎಂಬ ಕುತೂಹಲವಿದೆ. ಇವರಿಬ್ಬರು ಜನವರಿ 2026 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಅದಕ್ಕೂ ಮುನ್ನ ದೇಶೀಯ ಕ್ರಿಕೆಟ್ ಆಡುವ ಸಾಧ್ಯತೆಯಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಅಂತ್ಯಗೊಂಡಿದೆ. ಡಿಸೆಂಬರ್ 6 ರ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ನಿರ್ಣಾಯಕ ಪಂದ್ಯವನ್ನು ಗೆದ್ದುಕೊಂಡ ಟೀಂ ಇಂಡಿಯಾ 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು. ಇಡೀ ಸರಣಿಯಲ್ಲಿ ಅಭಿಮಾನಿಗಳು ಬಯಸಿದ್ದನ್ನು ನೀಡಿದ ಅನುಭವಿ ಬ್ಯಾಟಿಂಗ್ ಜೋಡಿ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದರು. ಕಿಂಗ್ ಕೊಹ್ಲಿ 2 ಶತಕ ಮತ್ತು 1 ಅರ್ಧಶತಕದೊಂದಿಗೆ ಒಟ್ಟು 302 ರನ್ ಬಾರಿಸಿದರೆ, ರೋಹಿತ್ 1 ಶತಕ ಮತ್ತು 1 ಅರ್ಧಶತಕದೊಂದಿಗೆ ಅದ್ಭುತ ಪ್ರದರ್ಶನ ನೀಡಿದರು.
ರೋಹಿತ್ ಮತ್ತು ವಿರಾಟ್ ಇಬ್ಬರೂ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವುದರಿಂದ ಇಬ್ಬರೂ ಈಗ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಅಲ್ಲದೆ, ರೋಹಿತ್ ಮತ್ತು ವಿರಾಟ್ ಇಬ್ಬರೂ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಆದ್ದರಿಂದ, ಈ ಸರಣಿಯ ನಂತರ ರೋಹಿತ್ ಮತ್ತು ವಿರಾಟ್ ಯಾವಾಗ ಆಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಸದಾ ಇರುತ್ತದೆ. ಹೀಗಾಗಿ ಈ ಅನುಭವಿ ಜೋಡಿ ಮತ್ತೆ ಯಾವಾಗ ಕಣಕ್ಕಿಳಿಯುತ್ತಾರೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ರೋ-ಕೊ ಜೋಡಿ ಮತ್ತೆ ಕಣಕ್ಕಿಳಿಯುವುದು ಯಾವಾಗ?
ರೋಹಿತ್ ಮತ್ತು ವಿರಾಟ್ ಮತ್ತೆ ಒಟ್ಟಿಗೆ ಆಡುವುದನ್ನು ನೋಡಲು ಅಭಿಮಾನಿಗಳು ಕಾಯಬೇಕಾಗುತ್ತದೆ. ಆದರೆ ಈ ಕಾಯುವಿಕೆ ತಿಂಗಳುಗಳಲ್ಲ, ಕೆಲವು ವಾರಗಳವರೆಗೆ ಅಷ್ಟೆ. ಟೀಂ ಇಂಡಿಯಾ ತನ್ನ ಮುಂದಿನ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಸರಣಿಯು ತವರಿನಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಏಕದಿನ ಸರಣಿಯ ಜನವರಿ 2026 ರಲ್ಲಿ ನಡೆಯಲಿದೆ.
ಭಾರತ vs ನ್ಯೂಜಿಲೆಂಡ್ ಏಕದಿನ ಸರಣಿ
ಎರಡೂ ತಂಡಗಳ ನಡುವೆ ಒಟ್ಟು 3 ಪಂದ್ಯಗಳು ನಡೆಯಲಿವೆ. ಜನವರಿ 11 ರಿಂದ ಸರಣಿ ಆರಂಭವಾಗಲಿದೆ. ಈ ಸರಣಿಗೆ ಭಾರತೀಯ ತಂಡವನ್ನು ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಘೋಷಿಸಲಾಗುವುದು ಎಂಬ ವರದಿಗಳಿವೆ.
ಏಕದಿನ ಸರಣಿ ವೇಳಾಪಟ್ಟಿ
ಮೊದಲ ಪಂದ್ಯ: ಜನವರಿ 11, ಬರೋಡಾ
ಎರಡನೇ ಪಂದ್ಯ: ಜನವರಿ 14, ರಾಜ್‌ಕೋಟ್
ಮೂರನೇ ಪಂದ್ಯ: ಜನವರಿ 18, ಇಂದೋರ್
ದೇಶೀಯ ಕ್ರಿಕೆಟ್ ಆಡಲಿರುವ ರೋ-ಕೊ
ಏತನ್ಮಧ್ಯೆ, ಏಕದಿನ ಸರಣಿಗೂ ಮುನ್ನ ರೋಹಿತ್ ಮತ್ತು ವಿರಾಟ್ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡಲಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿ ಡಿಸೆಂಬರ್ 24 ರಿಂದ ಜನವರಿ 18 ರವರೆಗೆ ನಡೆಯಲಿದೆ. ಇಬ್ಬರೂ ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ವಿರಾಟ್ ಕೊಹ್ಲಿ ಈ ಟೂರ್ನಿಗೆ ಲಭ್ಯವಿರುವುದಾಗಿ ದೆಹಲಿ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ರೋಹಿತ್ ಕೂಡ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 pm, Mon, 8 December 25
