India vs South Africa T20: ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಗಾಗಿ ಟೀಮ್ ಇಂಡಿಯಾ (Team India) ಭರ್ಜರಿ ಸಿದ್ದತೆಯಲ್ಲಿದೆ. ಜೂನ್ 9 ರಿಂದ ಶುರುವಾಗಲಿರುವ ಈ ಸರಣಿಯಿಂದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ರವೀಂದ್ರ ಜಡೇಜಾ ಹೊರಗುಳಿದಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಕೂಡ ಈ ಸರಣಿ ಆಡುತ್ತಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾದ ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅದರಲ್ಲೂ ಶಮಿ ಹಾಗೂ ಬುಮ್ರಾ ಇಲ್ಲದಿರುವ ಕಾರಣ ಬೌಲಿಂಗ್ ವಿಭಾಗದ ಹೊಣೆ ಭುವನೇಶ್ವರ್ ಕುಮಾರ್ ಹೆಗಲೇರಿದೆ. ಆದರೆ ಇಲ್ಲಿ ಭುವಿಗೆ ಸಾಥ್ ನೀಡಲಿರುವ ವೇಗಿಗಳು ಯಾರೆಲ್ಲಾ ಎಂಬುದೇ ಈಗ ಪ್ರಶ್ನೆ.
ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 3 ವೇಗಿಗಳೊಂದಿಗೆ ಕಣಕ್ಕಿಳಿಯುವುದು ಖಚಿತ. ಅದರಂತೆ ತಂಡದಲ್ಲಿ ವೇಗಿಗಳಾಗಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಇದ್ದಾರೆ. ಇವರಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಪ್ಲೇಯಿಂಗ್ ಇಲೆವೆನ್ನ ಭಾಗವಾಗಲಿದ್ದಾರೆ. ಇದಾಗ್ಯೂ 3ನೇ ಬೌಲರ್ ಆಗಿ ಯಾರು ಎಂಬ ಚರ್ಚೆ ಶುರುವಾಗಿದೆ.
ಏಕೆಂದರೆ ಇಲ್ಲಿ ಎಡಗೈ ವೇಗಿಯಾಗಿ ಯುವ ಬೌಲರ್ ಅರ್ಷದೀಪ್ ಸಿಂಗ್ ಇದ್ದಾರೆ. ಇನ್ನು ಸ್ಪೀಡ್ ಮಾಸ್ಟರ್ ಆಗಿ ಉಮ್ರಾನ್ ಮಲಿಕ್ ಸಹ ಚೊಚ್ಚಲ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಏಕೆಂದರೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಇವರಿಬ್ಬರು ತಮ್ಮ ಪ್ರಭಾವಶಾಲಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡು ಸಾಮರ್ಥ್ಯ ಹೊಂದಿದ್ದರೆ, ಅರ್ಷದೀಪ್ ಸಿಂಗ್ ಲೈನ್ ಅ್ಯಂಡ್ ಲೆಂಗ್ತ್ ಮೂಲಕ ವಿಕೆಟ್ ಟೇಕರ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಅರ್ಷದೀಪ್ ಸಿಂಗ್ ಅತ್ಯುತ್ತಮ ಬೌಲರ್ ಎಂಬುದನ್ನು ಐಪಿಎಲ್ ಮೂಲಕ ಸಾಬೀತುಪಡಿಸಿದ್ದಾರೆ.
ಈ ಬಾರಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯವಾಡಿದ್ದ ಅರ್ಷದೀಪ್ ಒಟ್ಟು 50 ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ಪಡೆದಿದ್ದು ಕೇವಲ 10 ವಿಕೆಟ್ ಮಾತ್ರ. ಆದರೆ ನೀಡಿರುವುದು 385 ರನ್ಗಳನ್ನಷ್ಟೇ. ಅಂದರೆ ಪ್ರತಿ ಓವರ್ಗೆ 7.70 ರನ್ ಅಷ್ಟೇ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿಯೇ ಎಕನಾಮಿ ಬೌಲರ್ ಆಗಿ ಅರ್ಷದೀಪ್ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಎಡಗೈ ವೇಗದ ಬೌಲರ್ ಇಲ್ಲ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನ ಭಾಗವಾಗುವ ಅವಕಾಶವನ್ನು ಅರ್ಷದೀಪ್ ಎದುರು ನೋಡುತ್ತಿದ್ದಾರೆ.
ಆದರೆ ಇಲ್ಲಿ ಸ್ಪೀನ್ ಗನ್ ಆಗಿ ಗುರುತಿಸಿಕೊಂಡಿರುವ ಉಮ್ರಾನ್ ಮಲಿಕ್ ಐಪಿಎಲ್‌ನಲ್ಲಿ ನಿಯಮಿತವಾಗಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ. ಅಲ್ಲದೆ ಯುವ ವೇಗಿಯ ಸಾಮರ್ಥ್ಯಕ್ಕೆ ಖ್ಯಾತ ಆಟಗಾರರೇ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿಯ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 294 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 22 ವಿಕೆಟ್ ಉರುಳಿಸಿ ಮಿಂಚಿದ್ದಾರೆ. ಅಂದರೆ ಅರ್ಷದೀಪ್ ಸಿಂಗ್ಗಿಂತ ಡಬಲ್ ವಿಕೆಟ್ ಕಬಳಿಸಿದ್ದಾರೆ. ಆದರೆ ಪ್ರತಿ ಓವರ್ಗೆ 9.03 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ.
ಇಲ್ಲಿ ಉಮ್ರಾನ್ ಮಲಿಕ್ ವೇಗದಿಂದ ಬ್ಯಾಟ್ಸ್ಮನ್ಗಳನ್ನು ಕಾಡಿದರೂ, ಅರ್ಷದೀಪ್ ಸಿಂಗ್ ಲೈನ್ ಅ್ಯಂಡ್ ಲೆಂಗ್ತ್ ಮೂಲಕ ಎದುರಾಳಿಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದಲ್ಲಿ ಎಡಗೈ ವೇಗದ ಬೌಲರ್ನ ಕೊರತೆ ಇರುವ ಕಾರಣ ಮೊದಲ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚು.
ಅಷ್ಟೇ ಅಲ್ಲದೆ ಮೊದಲ ಟಿ20 ಪಂದ್ಯ ನಡೆಯಲಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈಗಾಗಲೇ ಟೀಮ್ ಇಂಡಿಯಾ ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ವೇಳೆ ನೆಟ್ಸ್ನಲ್ಲಿ ಉಮ್ರಾನ್ ಮಲಿಕ್ಗಿಂತ ಅರ್ಷದೀಪ್ ಸಿಂಗ್ ಹೆಚ್ಚು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎನ್ನಬಹುದು.
ಟೀಮ್ ಇಂಡಿಯಾ ಟಿ20 ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:14 pm, Tue, 7 June 22