IND vs SA: ಶತಕ ವಂಚಿತರಾದರೂ ರೋಹಿತ್- ಗಂಗೂಲಿ ದಾಖಲೆಯನ್ನು ಹಿಂದಿಕ್ಕಿದ ಇಶಾನ್ ಕಿಶನ್..!
Ishan Kishan: ಸ್ಫೋಟಕ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ ಕೇವಲ 84 ಎಸೆತಗಳಲ್ಲಿ 93 ರನ್ ಗಳಿಸಿ ಬಿರುಸಿನ ಆಟವಾಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 4 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಬಂದವು.
ಭಾನುವಾರ ರಾಂಚಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ (Team India) ದಕ್ಷಿಣ ಆಫ್ರಿಕಾ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಬೇಕಾಯಿತು. ಇದರಿಂದಾಗಿ ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 278 ರನ್ ಗಳಿಸಿತು. ಬೃಹತ್ ಗುರಿಯೊಂದಿಗೆ ಅಖಾಡಕ್ಕಿಳಿದ ಟೀಂ ಇಂಡಿಯಾ 46ನೇ ಓವರ್ನಲ್ಲಿಯೇ ಗುರಿ ತಲುಪಿ ಸರಣಿಯಲ್ಲಿ ಸಮಬಲ ಸಾಧಿಸಿತು. ಈ ಗೆಲುವಿನಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಇಶಾನ್ ಕಿಶನ್ (Ishan Kishan) ಅವರ ಜೊತೆಯಾಟ ಪ್ರಮುಖ ಪಾತ್ರವಹಿಸಿತು.
ಗುರಿ ಬೆನ್ನಟ್ಟಿದ ಭಾರತಕ್ಕೆ 50 ರನ್ ಆಗುವುದರೊಳಿಗೆ ಧವನ್ ಹಾಗೂ ಗಿಲ್ ವಿಕೆಟ್ ರೂಪಲ್ಲಿ ಆಘಾತ ಎದುರಾಗಿತ್ತು. ಆ ಬಳಿಕ ಜೊತೆಯಾದ ಅಯ್ಯರ್ ಹಾಗೂ ಕಿಶನ್ ತಂಡವನ್ನು ಸುಲಭವಾಗಿ ಗೆಲುವಿನ ದಡದತ್ತ ಕೊಂಡೊಯ್ದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ ಕೇವಲ 84 ಎಸೆತಗಳಲ್ಲಿ 93 ರನ್ ಗಳಿಸಿ ಬಿರುಸಿನ ಆಟವಾಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 4 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಬಂದವು. ಆದರೆ ಶತಕದಂಚಿನಲ್ಲಿ ಎಡವಿದ ಕಿಶನ್, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕದಿಂದ ವಂಚಿತರಾದರು. ಆದರೆ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ ತಮ್ಮ ಕೆಲಸ ಮಾಡಿ ಮುಗಿಸಿದ್ದ ಇಶಾನ್ ಈ ಸುಂಟರಗಾಳಿ ಇನ್ನಿಂಗ್ಸ್‌ನೊಂದಿಗೆ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು. ಈ ಪಂದ್ಯದಲ್ಲಿ ಬರೋಬ್ಬರಿ 7 ಸಿಕ್ಸರ್ ಬಾರಿಸಿದ ಕಿಶನ್, ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿಯಂತಹ ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಹಿಂದಕ್ಕಿದ್ದಾರೆ.
ಭಾನುವಾರ ರಾಂಚಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಏಳು ಸಿಕ್ಸರ್ ಬಾರಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ದಾಖಲೆಯ ಸಿಕ್ಸರ್ ಪಟ್ಟಿಯಲ್ಲಿ ಕಿಶನ್, ಈಗ ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿಯನ್ನು ಹಿಂದಿಕ್ಕಿದ್ದಾರೆ.
ಆಫ್ರಿಕಾ ವಿರುದ್ಧ ಏಕದಿನದಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ಸ್
ಯೂಸುಫ್ ಪಠಾಣ್ – 8 ಸಿಕ್ಸ್ – ಸೆಂಚುರಿಯನ್, 2011
ಇಶಾನ್ ಕಿಶನ್ – 7 ಸಿಕ್ಸ್ – ರಾಂಚಿ, 2022
ಸೌರವ್ ಗಂಗೂಲಿ – 6 ಸಿಕ್ಸ್ – ನೈರೋಬಿ, 2000
ರೋಹಿತ್ ಶರ್ಮಾ – 6 ಸಿಕ್ಸ್ – ಕಾನ್ಪುರ, 2015
ಪಂದ್ಯದ ವಿಚಾರಕ್ಕೆ ಬಂದರೆ..
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಸಾಧಿಸಿದೆ. ರಾಂಚಿಯಲ್ಲಿ ನಡೆದ ಈ ಗೆಲುವಿನೊಂದಿಗೆ ಭಾರತ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ದಕ್ಷಿಣ ಆಫ್ರಿಕಾದ ನಾಯಕ ಕೇಶವ್ ಮಹಾರಾಜ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದರು. ತಂಡದ ಪರವಾಗಿ ಏಡೆನ್ ಮಾರ್ಕ್ರಾಮ್ 89 ಎಸೆತಗಳಲ್ಲಿ 79 ರನ್ ಗಳಿಸಿದರೆ, ರೀಜಾ ಹೆಂಡ್ರಿಕ್ಸ್ 76 ಎಸೆತಗಳಲ್ಲಿ 74 ರನ್ ಗಳಿಸಿದರು.
ಕೊನೆಯ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಡೇವಿಡ್ ಮಿಲ್ಲರ್ 35 ರನ್‌ಗಳ ಕೊಡುಗೆ ನೀಡಿದರು. ಭಾರತದ ಪರ ಮೊಹಮ್ಮದ್ ಸಿರಾಜ್ ಅತಿ ಹೆಚ್ಚು 3 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತಕ್ಕೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರ ಅದ್ಭುತ ಇನ್ನಿಂಗ್ಸ್ ಗೆಲುವಿಗೆ ನೆರವಾಯಿತು. ಈ ಪಂದ್ಯದಲ್ಲಿ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕ ಬಾರಿಸಿದ ಶ್ರೇಯಸ್, 111 ಎಸೆತಗಳಲ್ಲಿ 113 ರನ್ ಗಳಿಸಿದರು. ಇದೇ ವೇಳೆ ಶತಕ ವಂಚಿತರಾದ ಇಶಾನ್, 7 ಭರ್ಜರಿ ಸಿಕ್ಸರ್ಗಳೊಂದಿಗೆ 93 ರನ್ ಗಳಿಸಿದರು. 161 ರನ್‌ಗಳ ಜೊತೆಯಾಟ ನಡೆಸಿದ ಈ ಜೋಡಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಅಂತಿಮವಾಗಿ ಸಂಜು ಸ್ಯಾಮ್ಸನ್ ಕೂಡ 30 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು.
Published On - 5:00 pm, Mon, 10 October 22