IND vs SA: ಕಷ್ಟದಲ್ಲಿ ಜೊತೆಗಿದ್ದೀರಿ, ನಿಮ್ಮ ಸುರಕ್ಷತೆ ನಮ್ಮ ಜವಬ್ದಾರಿ; ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಬಹುತೇಕ ಖಚಿತ

IND vs SA: ಭಾರತ 'ಎ' ತಂಡದ ಪ್ರವಾಸವನ್ನು ಮುಂದುವರಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಭಾರತದ ನಿರ್ಧಾರವು ತಮ್ಮ ಗಡಿಗಳನ್ನು ಮುಚ್ಚಲು ಮತ್ತು ದಕ್ಷಿಣ ಆಫ್ರಿಕಾದಿಂದ ಪ್ರಯಾಣವನ್ನು ಮಿತಿಗೊಳಿಸಲು ನಿರ್ಧರಿಸಿದ ಹಲವಾರು ದೇಶಗಳಿಗೆ ವ್ಯತಿರಿಕ್ತವಾಗಿದೆ ಎಂದು ಸಚಿವಾಲಯ ಹೇಳಿದೆ.

IND vs SA: ಕಷ್ಟದಲ್ಲಿ ಜೊತೆಗಿದ್ದೀರಿ, ನಿಮ್ಮ ಸುರಕ್ಷತೆ ನಮ್ಮ ಜವಬ್ದಾರಿ; ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಬಹುತೇಕ ಖಚಿತ
ಭಾರತ- ಆಫ್ರಿಕಾ ಆಟಗಾರರು
Edited By:

Updated on: Nov 30, 2021 | 5:13 PM

ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡಲಿದೆಯೇ? ಈ ಸಮಯದಲ್ಲಿ ಈ ಪ್ರಶ್ನೆ ಪ್ರತಿಯೊಬ್ಬ ಕ್ರೀಡಾ ಪ್ರೇಮಿಯ ಮನದಲ್ಲಿದೆ. ವಾಸ್ತವವಾಗಿ, ಕೊರೊನಾದ ಓಮಿಕ್ರಾನ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿದೆ. ಹೀಗಾಗಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಇನ್ನೂ ಖಚಿವಾಗಿಲ್ಲ. ಆದರೆ, ಟೀಂ ಇಂಡಿಯಾವನ್ನು ಸುರಕ್ಷಿತವಾಗಿಡಲು ದಕ್ಷಿಣ ಆಫ್ರಿಕಾ ಸರ್ಕಾರ ಸಂಪೂರ್ಣ ಭರವಸೆ ನೀಡಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಸಂಪೂರ್ಣ ಬಯೋ ಬಬಲ್ ವಾತಾವರಣವನ್ನು ನಿರ್ಮಿಸಲಾಗುವುದು ಎಂದು ದಕ್ಷಿಣ ಆಫ್ರಿಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಜೊತೆಗೆ ಕೋವಿಡ್ -19 ರ ಹೊಸ ರೂಪಾಂತರದ ಆತಂಕವಿದ್ದರೂ ಭಾರತ ‘ಎ’ ತಂಡದ ಪ್ರವಾಸದಿಂದ ಹಿಂದೆ ಸರಿಯದಿದ್ದಕ್ಕಾಗಿ ಸಚಿವಾಲಯವು ಬಿಸಿಸಿಐ ಅನ್ನು ಶ್ಲಾಘಿಸಿದೆ.

ಮಂಗಳವಾರದಿಂದ ಬ್ಲೋಮ್‌ಫಾಂಟೈನ್‌ನಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ಎರಡನೇ ಅನಧಿಕೃತ ಟೆಸ್ಟ್ ಅನ್ನು ಆಡಲಿದೆ. ಹೊಸ ಓಮಿಕ್ರಾನ್ ರೂಪಾಂತರದಿಂದಾಗಿ ಜಾಗತಿಕ ಕಾಳಜಿಯ ಹೊರತಾಗಿಯೂ ದಕ್ಷಿಣ ಆಫ್ರಿಕಾದಲ್ಲಿ ಸರಣಿಯನ್ನು ಮುಂದುವರಿಸಲು ಭಾರತೀಯ ಮಂಡಳಿ ನಿರ್ಧರಿಸಿದೆ. ಭಾರತೀಯ ಹಿರಿಯರ ತಂಡವು ಡಿಸೆಂಬರ್ 17 ರಿಂದ ದಕ್ಷಿಣ ಆಫ್ರಿಕಾದಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ, ನಂತರ 3 ODI ಮತ್ತು 4 T20I ಗಳನ್ನು ಆಡಲಿದೆ.

ಭಾರತೀಯ ಆಟಗಾರರ ಸುರಕ್ಷತೆ ಖಾತರಿಪಡಿಸಿದ ದಕ್ಷಿಣ ಆಫ್ರಿಕಾ
ವಿರಾಟ್ ಕೊಹ್ಲಿ ಮತ್ತು ತಂಡವು ಡಿಸೆಂಬರ್ 9 ರಂದು ದಕ್ಷಿಣ ಆಫ್ರಿಕಾವನ್ನು ತಲುಪಲಿದೆ. ಆದರೆ ದೇಶದಲ್ಲಿ ಕೋವಿಡ್‌ನ ಓಮಿಕ್ರಾನ್ ರೂಪಾಂತರ ಕಂಡು ಬಂದ ನಂತರ ಪ್ರವಾಸದ ಬಗ್ಗೆ ಕೆಲವು ಆತಂಕಗಳಿವೆ. ಈ ಹೊಸ ರೂಪಾಂತರ ವೈರನ್ ಪತ್ತೆಯಾದ ಬಳಿಕ ಅನೇಕ ದೇಶಗಳು ಪ್ರಯಾಣ ನಿರ್ಬಂಧಗಳನ್ನು ವಿಧಿಸಿವೆ. ದೇಶದ ವಿದೇಶಾಂಗ ಸಚಿವಾಲಯವಾಗಿರುವ ಅಂತರರಾಷ್ಟ್ರೀಯ ಸಂಬಂಧ ಮತ್ತು ಸಹಕಾರ ಇಲಾಖೆ (ಡರ್ಕೊ) ಭಾರತ ತಂಡದ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ‘ಎ’ ತಂಡವನ್ನು ಹೊರತುಪಡಿಸಿ, ಎರಡೂ ರಾಷ್ಟ್ರೀಯ ತಂಡಗಳಿಗೆ ಸಂಪೂರ್ಣ ಬಯೋ ಬಬಲ್ ವಾತಾವರಣವನ್ನು ನಿರ್ಮಿಸಲಾಗುವುದು ಎಂದಿದೆ. “ಭಾರತ ‘ಎ’ ತಂಡದ ಪ್ರವಾಸವನ್ನು ಮುಂದುವರಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಭಾರತದ ನಿರ್ಧಾರವು ತಮ್ಮ ಗಡಿಗಳನ್ನು ಮುಚ್ಚಲು ಮತ್ತು ದಕ್ಷಿಣ ಆಫ್ರಿಕಾದಿಂದ ಪ್ರಯಾಣವನ್ನು ಮಿತಿಗೊಳಿಸಲು ನಿರ್ಧರಿಸಿದ ಹಲವಾರು ದೇಶಗಳಿಗೆ ವ್ಯತಿರಿಕ್ತವಾಗಿದೆ ಎಂದು ಸಚಿವಾಲಯ ಹೇಳಿದೆ.

ಬಿಸಿಸಿಐ ಮೆಚ್ಚಿದ ದಕ್ಷಿಣ ಆಫ್ರಿಕಾ
ಪ್ರವಾಸವನ್ನು ಮುಂದುವರಿಸಿದ್ದಕ್ಕಾಗಿ ಬಿಸಿಸಿಐಗೆ ದಕ್ಷಿಣ ಆಫ್ರಿಕಾ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ ಸೆಂಚುರಿಯನ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯವು ಜನವರಿ 3 ರಿಂದ ಕೇಪ್‌ಟೌನ್‌ನಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ ಮರಳಿದ 30ನೇ ವಾರ್ಷಿಕೋತ್ಸವ ಎಂದು ಸಚಿವಾಲಯ ತಿಳಿಸಿದೆ. 1970 ರಲ್ಲಿ ದಕ್ಷಿಣ ಆಫ್ರಿಕಾದ ಸರ್ಕಾರದ ವರ್ಣಭೇದ ನೀತಿಯಿಂದಾಗಿ ದಕ್ಷಿಣ ಆಫ್ರಿಕಾದ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಿದ ನಂತರ, 1991 ರಲ್ಲಿ ದೇಶದ ಅಂತರರಾಷ್ಟ್ರೀಯ ತಂಡವನ್ನು ಆಯೋಜಿಸಿದ ಮೊದಲ ದೇಶ ಭಾರತವಾಯಿತು. “ಜನವರಿ 2, 2022 ರಂದು ಕೇಪ್ ಟೌನ್‌ನಲ್ಲಿ ನಡೆಯುವ ಅಭಿನಂದನಾ ಸಮಾರಂಭದೊಂದಿಗೆ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈವೆಂಟ್ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಬಲವಾದ ಸಂಬಂಧವನ್ನು ಪ್ರದರ್ಶಿಸುತ್ತದೆ, ಇದು ಮತ್ತೊಮ್ಮೆ ಎರಡು ಭಾರತೀಯ ತಂಡದ ಪ್ರವಾಸಗಳಿಂದ ಪ್ರದರ್ಶಿಸಲ್ಪಟ್ಟಿದೆ ಎಂದಿದೆ.