IND vs SA: ಸೋತರೂ ಬೇಜಾರಿಲ್ಲ: ಸೂರ್ಯಕುಮಾರ್ ಯಾದವ್

|

Updated on: Nov 11, 2024 | 8:54 AM

South Africa vs India: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವು ನವೆಂಬರ್ 13 ರಂದು ಸೆಂಚುರಿಯನ್​ನಲ್ಲಿ ನಡೆಯಲಿದೆ. ಹಾಗೆಯೇ ಈ ಸರಣಿಯ ಕೊನೆಯ ಪಂದ್ಯ ನವೆಂಬರ್ 15 ರಂದು ಜೋಬರ್ಗ್​ನಲ್ಲಿ ಜರುಗಲಿದೆ.

IND vs SA: ಸೋತರೂ ಬೇಜಾರಿಲ್ಲ: ಸೂರ್ಯಕುಮಾರ್ ಯಾದವ್
Suryakumar Yadav
Follow us on

ಗೆಬಹಾದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.
ಬ್ಯಾಟರ್​ಗಳ ಪಾಲಿಗೆ ಕಠಿಣವಾಗಿದ್ದ ಈ ಪಿಚ್​ನಲ್ಲಿ ಹಾರ್ದಿಕ್ ಪಾಂಡ್ಯ ಅಜೇಯ 39 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 124 ರನ್ ಕಲೆಹಾಕಿತು.

125 ರನ್​ಗಳ ಸುಲಭ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಕೂಡ ರನ್​ಗಳಿಸಲು ಪರದಾಡಿದರು. ಇದಾಗ್ಯೂ ಟ್ರಿಸ್ಟನ್ ಸ್ಟಬ್ಸ್ (47) ಅವರ ಜವಾಬ್ದಾರಿಯುತ ಇನಿಂಗ್ಸ್​ನೊಂದಿಗೆ 19 ಓವರ್​ಗಳಲ್ಲಿ 128 ರನ್​ಗಳಿಸಿ ಸೌತ್ ಆಫ್ರಿಕಾ ತಂಡವು 3 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ನಾವು ಕಡಿಮೆ ಸ್ಕೋರ್​ಗಳಿಸಿದರೂ ಬೌಲರ್​ಗಳು ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಹೀಗಾಗಿ ನಮ್ಮ ತಂಡದ ಪ್ರದರ್ಶನದ ಬಗ್ಗೆಯಾಗಲಿ, ಸೋಲಿನ ಬಗ್ಗೆಯಾಗಲಿ ಯಾವುದೇ ಬೇಜಾರಿಲ್ಲ ಎಂದಿದ್ದಾರೆ.

ಟಿ20 ಪಂದ್ಯದಲ್ಲಿ ಯಾವುದೇ ತಂಡ 125 ಅಥವಾ 140 ರನ್​ ಗಳಿಸಲು ಬಯಸುವುದಿಲ್ಲ. ಇದಾಗ್ಯೂ ಅತೀ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಲು ಪ್ರಯತ್ನಿಸಿದ ನಮ್ಮ ಬೌಲರ್​ಗಳ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಅದರಲ್ಲೂ 125 ರನ್​ಗಳ ಗುರಿಯ ನಡುವೆ ವರುಣ್ ಚಕ್ರವರ್ತಿ 5 ವಿಕೆಟ್​ಗಳನ್ನು ಕಬಳಿಸಿರುವುದು ನಿಜಕ್ಕೂ ಶ್ರೇಷ್ಠ ಪ್ರದರ್ಶನ ಎಂದು ಸೂರ್ಯಕುಮಾರ್ ಕೊಂಡಾಡಿದ್ದಾರೆ.

ಸದ್ಯ ನಾಲ್ಕು ಪಂದ್ಯಗಳ ಸರಣಿಯಲ್ಲಿ ನಾವು ಅವರು ಒಂದೊಂದು ಪಂದ್ಯಗಳನ್ನು ಗೆದ್ದಿದ್ದೇವೆ. ಇನ್ನೂ ಎರಡು ಪಂದ್ಯಗಳು ಉಳಿದಿವೆ. ಈ ಪಂದ್ಯಗಳಲ್ಲೂ ಅತ್ಯುತ್ತಮ ಮನರಂಜನೆಯನ್ನು ನಿರೀಕ್ಷಿಸಬಹುದು ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.  ಅಲ್ಲದೆ  ಮುಂದಿನ ಪಂದ್ಯಗಳಲ್ಲಿ ಕಂಬ್ಯಾಕ್ ಮಾಡುವ ವಿಶ್ವಾಸವನ್ನು ಸಹ ಟೀಮ್ ಇಂಡಿಯಾ ನಾಯಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IND vs SA: ಸೊನ್ನೆ ಸುತ್ತಿ ಬೇಡದ ದಾಖಲೆ ಬರೆದ ಸಂಜು ಸ್ಯಾಮ್ಸನ್

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವು ನವೆಂಬರ್ 13 ರಂದು ಸೆಂಚುರಿಯನ್​ನಲ್ಲಿ ನಡೆಯಲಿದೆ. ಹಾಗೆಯೇ ಈ ಸರಣಿಯ ಕೊನೆಯ ಪಂದ್ಯ ನವೆಂಬರ್ 15 ರಂದು ಜೋಬರ್ಗ್​ನಲ್ಲಿ ಜರುಗಲಿದೆ.