ಟೀಮ್ ಇಂಡಿಯಾದ (Team India) ಯುವ ಸ್ಪೀಡ್ ಗನ್ ಉಮ್ರಾನ್ ಮಲಿಕ್ (Umran Malik) ತಮ್ಮ ಮಾರಕ ಬೌಲಿಂಗ್ ಮೂಲಕ ಈಗಾಗಲೇ ಸಖತ್ ಸದ್ದು ಮಾಡಿದ್ದಾರೆ. ಐಪಿಎಲ್ ಸೀಸನ್ 15 ನಲ್ಲಿ ನಿಯಮಿತವಾಗಿ 150 ರ ಅಸುಪಾಸಿನಲ್ಲಿ ಚೆಂಡೆಸೆದಿದ್ದ ಮಲಿಕ್ 22 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದಿದ್ದರು. ಅದರಲ್ಲೂ ಗಂಟೆಗೆ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ ಭಾರತೀಯ ಬೌಲರ್ ಎಂಬ ದಾಖಲೆ ಬರೆದಿದ್ದರು. ಹೀಗಾಗಿಯೇ ಕೇವಲ 22 ವಯಸ್ಸಿನಲ್ಲೇ ಅಧ್ಭುತ ವೇಗವನ್ನು ಹೊಂದಿರುವ ಜಮ್ಮು ಕಾಶ್ಮೀರದ ಯುವ ವೇಗಿ ಮುಂಬರುವ ದಿನಗಳಲ್ಲಿ ಕ್ರಿಕೆಟ್ ಅಂಗಳದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಕೂಡ ಮಲಿಕ್ ಪಾಕಿಸ್ತಾನ್ ವೇಗಿ ಶೊಯೇಬ್ ಅಖ್ತರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ನಾನು ಶೋಯೆಬ್ ಅಖ್ತರ್ ಅವರ ವೇಗದ ಬಾಲ್ ದಾಖಲೆಯನ್ನು ಮುರಿಯಬೇಕೆಂದಿರುವೆ ಎಂದು ಮಲಿಕ್ ಕೂಡ ಹೇಳಿದ್ದರು.
ಇದೀಗ ಅಂತಹದೊಂದು ವಿಶ್ವ ದಾಖಲೆ ಬರೆಯಲು ಉಮ್ರಾನ್ ಮಲಿಕ್ ಸಜ್ಜಾಗುತ್ತಿದ್ದಾರೆ. ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಗಾಗಿ ಟೀಮ್ ಇಂಡಿಯಾ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ ಉಮ್ರಾನ್ ಕೆಲ ಗಂಟೆಗಳ ಕಾಲ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದರು. ವಿಶೇಷ ಎಂದರೆ ಈ ವೇಳೆ ಉಮ್ರಾನ್ ಗಂಟೆಗೆ 163.7 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ ಎಂದು ವರದಿಯಾಗಿದೆ. ಅಂದರೆ ಅಭ್ಯಾಸದ ವೇಳೆಯೇ ಶೊಯೇಬ್ ಅಖ್ತರ್ ಅವರ ದಾಖಲೆಯನ್ನೇ ಹಿಂದಿಕ್ಕಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ ನ್ಯೂಝಿಲೆಂಡ್ ವಿರುದ್ದ ಅಖ್ತರ್ 161.3 kph ವೇಗದಲ್ಲಿ ಚೆಂಡೆಸೆದು ವಿಶ್ವ ದಾಖಲೆ ಬರೆದಿದ್ದರು. ಈ ದಾಖಲೆ ನಿರ್ಮಾಣವಾಗಿ 2 ದಶಕಗಳೇ ಕಳೆದರೂ ಈ ದಾಖಲೆಯನ್ನು ಮೀರುವಂತೆ ಯಾರೂ ಕೂಡ ಬೌಲಿಂಗ್ ಮಾಡಿರಲಿಲ್ಲ.
ಇದೀಗ ಉಮ್ರಾನ್ ಮಲಿಕ್ ಅಭ್ಯಾಸದ ವೇಳೆ 163.7 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಂದರೆ ಭವಿಷ್ಯದಲ್ಲಿ ಅಖ್ತರ್ ದಾಖಲೆಯನ್ನು ಟೀಮ್ ಇಂಡಿಯಾ ವೇಗಿ ಮುರಿಯುವುದು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ ಶೊಯೇಬ್ ಅಖ್ತರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 161.3 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದರೆ, ಉಮ್ರಾನ್ ಮಲಿಕ್ ಅಭ್ಯಾಸ ವೇಳೆ 163.7 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ. ಅಂದರೆ ಅಖ್ತರ್ ದಾಖಲೆಯನ್ನು ಈಗಾಗಲೇ ಹಿಂದಿಕ್ಕಿದ್ದಾರೆ. ಇದಾಗ್ಯೂ ಇದು ಅಂತಾರಾಷ್ಟ್ರೀಯ ದಾಖಲೆಯಲ್ಲಿ ಪರಿಗಣನೆಗೆ ಬರುವುದಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಅಖ್ತರ್ ದಾಖಲೆಯನ್ನು ಮುರಿದರೂ ಅಚ್ಚರಿಪಡಬೇಕಿಲ್ಲ.
ಇನ್ನು ಉಮ್ರಾನ್ ಮಲಿಕ್ ಅವರ ವೇಗದ ಬೌಲಿಂಗ್ಗೆ ಕೋಚ್ ರಾಹುಲ್ ದ್ರಾವಿಡ್ ಕೂಡ ಪ್ರಭಾವಿತರಾಗಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಯುವ ವೇಗಿಯನ್ನು ಟೆಸ್ಟ್ ಕ್ರಿಕೆಟ್ಗೆ ಪರಿಚಯಿಸುವ ಬಗ್ಗೆ ಕೂಡ ದ್ರಾವಿಡ್ ಚರ್ಚಿಸಿದ್ದಾರೆ ಎನ್ನಲಾಗಿದೆ.
ಸದ್ಯ ಅಭ್ಯಾಸ ಪಂದ್ಯದ ವೇಳೆ ಬೆಂಕಿ ಚೆಂಡೆಸೆಯುವ ಮೂಲಕ ಎಲ್ಲರ ಗಮನ ಸೆಳೆದಿರುವ ಉಮ್ರಾನ್ ಮಲಿಕ್, ಶೊಯೇಬ್ ಅಖ್ತರ್ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಹೊಂದಿರುವುದುನ್ನು ಸಾಬೀತುಪಡಿಸಿದ್ದಾರೆ. ಅದರಂತೆ ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ಅಖ್ತರ್ ದಾಖಲೆಯನ್ನು ಮುರಿಯಲಿದ್ದಾರಾ ಕಾದು ನೋಡಬೇಕಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.