IND vs SA: ಗೆದ್ದರೆ ವಿಶ್ವದಾಖಲೆ, ಸೋತರೆ ಕೆಟ್ಟ ದಾಖಲೆ..!
India vs South africa: ಈ ದಾಖಲೆಯನ್ನು ಸರಿಗಟ್ಟಿರುವ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದದ ಮೊದಲ ಪಂದ್ಯ ಗೆದ್ದು ವಿಶ್ವ ದಾಖಲೆ ಬರೆಯುವ ಅವಕಾಶ ಹೊಂದಿದೆ.
India vs South Africa T20: ಭಾರತ-ಸೌತ್ ಆಫ್ರಿಕಾ ನಡುವಣ ಟಿ20 ಸರಣಿ ನಾಳೆಯಿಂದ (ಜೂನ್ 9) ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ಬಹಳ ಮಹತ್ವದ ಪಂದ್ಯ. ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಈಗಾಗಲೇ ಸತತವಾಗಿ 12 ಟಿ20 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದರೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ಏಕೆಂದರೆ ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ್ ಹಾಗೂ ರೊಮೆನಿಯಾ ತಂಡಗಳು ಸತತ 12 ಗೆಲುವು ದಾಖಲಿಸಿ ದಾಖಲೆ ಬರೆದಿದೆ.
ಇದೀಗ ಈ ದಾಖಲೆಯನ್ನು ಸರಿಗಟ್ಟಿರುವ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದದ ಮೊದಲ ಪಂದ್ಯ ಗೆದ್ದು ವಿಶ್ವ ದಾಖಲೆ ಬರೆಯುವ ಅವಕಾಶ ಹೊಂದಿದೆ. ಅಂದರೆ ಅಫ್ಘಾನಿಸ್ತಾನ್ ಹಾಗೂ ರೊಮೊನಿಯಾ ದಾಖಲೆಯನ್ನು ಮುರಿಯಲು ಟೀಮ್ ಇಂಡಿಯಾಗೆ ಒಂದು ಗೆಲುವಿನ ಅವಶ್ಯಕತೆಯಿದೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ದ ಭಾರತ ತಂಡವು ಜಯ ಸಾಧಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಮತ್ತೊಂದೆಡೆ ಈ ಪಂದ್ಯದಲ್ಲಿ ಸೋತರೆ ಟೀಮ್ ಇಂಡಿಯಾ ಟಿ20 ನಾಯಕನಾಗಿ ಪದಾರ್ಪಣೆ ಮಾಡಲಿರುವ ಕೆಎಲ್ ರಾಹುಲ್ ಅವರ ಹೆಸರಿಗೆ ಕೆಟ್ಟ ದಾಖಲೆಯೊಂದು ಸೇರ್ಪಡೆಯಾಗಲಿದೆ. ಏಕೆಂದರೆ ಕೆಎಲ್ ರಾಹುಲ್ ಈವರೆಗೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಎರಡೂ ಸ್ವರೂಪಗಳಲ್ಲೂ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋತಿದೆ. ಇದೀಗ ಟಿ20 ಕ್ರಿಕೆಟ್ನಲ್ಲಿ ಗೆಲ್ಲುವ ಮೂಲಕ ಜಯದ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ ಕೆಎಲ್ ರಾಹುಲ್.
ಒಂದು ವೇಳೆ ಸೋತರೆ ಕೆಟ್ಟ ದಾಖಲೆಯೊಂದು ಕೆಎಲ್ ರಾಹುಲ್ ಪಾಲಾಗಲಿದೆ. ಏಕೆಂದರೆ ಟೀಮ್ ಇಂಡಿಯಾ ಪರ ನಾಯಕನಾಗಿ ಆಡಿದ ಮೊದಲ ಪಂದ್ಯಗಳಲ್ಲಿ ಸೋತ ಕೆಟ್ಟ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ಮೊದಲ ಟೆಸ್ಟ್, ಮೊದಲ ಏಕದಿನ ಮತ್ತು ಮೊದಲ ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು. ಈ ಮೂಲಕ ಮೂರು ಸ್ವರೂಪಗಳಲ್ಲಿ ಸೋಲಿನೊಂದಿಗೆ ಕಪ್ತಾನಗಿರಿ ಆರಂಭಿಸಿದ ಕೆಟ್ಟ ದಾಖಲೆಯೊಂದನ್ನು ಕೊಹ್ಲಿ ಬರೆದಿದ್ದರು. ಇದೀಗ ದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ಆ ಕೆಟ್ಟ ದಾಖಲೆ ಕೆಎಲ್ ರಾಹುಲ್ ಪಾಲಾಗಲಿದೆ. ಅಲ್ಲದೆ ವಿರಾಟ್ ಕೊಹ್ಲಿ ಬಳಿಕ ಅಪರೂಪದ ಹೀನಾಯಕ ದಾಖಲೆ ಬರೆದ ಭಾರತದ ಎರಡನೇ ನಾಯಕನಾಗಿ ಕೆಎಲ್ ರಾಹುಲ್ ಹೆಸರು ಇತಿಹಾಸ ಪುಟಕ್ಕೆ ಸೇರ್ಪಡೆಯಾಗಲಿದೆ.
ಹೀಗಾಗಿ ಸೌತ್ ಆಫ್ರಿಕಾ ವಿರುದ್ದದ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ವಿಶ್ವ ದಾಖಲೆಯ ಪಂದ್ಯವಾದರೆ, ಕೆಎಲ್ ರಾಹುಲ್ ಪಾಲಿಗೆ ಕೆಟ್ಟ ದಾಖಲೆಯಿಂದ ಪಾರಾಗಬೇಕಾದ ಪಂದ್ಯವಾಗಿದೆ. ಹಾಗಾಗಿ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸತತವಾಗಿ 13 ಟಿ20 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಟೀಮ್ ಇಂಡಿಯಾ ವಿಶ್ವ ದಾಖಲೆ ಬರೆಯಲಿದೆ. ಇನ್ನು ಸೋತರೆ ಮೂರು ಸ್ವರೂಪಗಳಲ್ಲೂ ನಾಯಕನಾಗಿ ಸೋಲನುಭವಿಸಿ ಕೆಟ್ಟ ದಾಖಲೆಯೊಂದು ಕೆಎಲ್ ರಾಹುಲ್ ಪಾಲಾಗಲಿದೆ.
ಟೀಮ್ ಇಂಡಿಯಾ ಟಿ20 ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ಟಿ20 ತಂಡ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ತಬ್ರೇಝ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಯಾನ್ಸೆನ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.