
ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಅತ್ಯದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 462 ರನ್ ಪೇರಿಸಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡಕ್ಕೆ ಟೀಮ್ ಇಂಡಿಯಾ ಬೌಲರ್ಗಳು ಆರಂಭಿಕ ಆಘಾತ ನೀಡಿದ್ದಾರೆ.
ಶ್ರೀಲಂಕಾ ತಂಡದ ಮೊದಲ ಇನ್ನಿಂಗ್ಸ್ನ 17ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಎಸೆದ ಚೆಂಡನ್ನು ಶ್ರೀಲಂಕಾದ ಉಪನಾಯಕ ಕಮಿಂದು ಮೆಂಡಿಸ್ (14 ರನ್) ಎಕ್ಸ್ಟ್ರಾ ಕವರ್ ಕಡೆಗೆ ಬಲವಾಗಿ ಹೊಡೆದರು.
ಬೌಂಡರಿಯತ್ತ ಮುನ್ನುಗ್ಗುತ್ತಿದ್ದ ಆ ವೇಗದ ಚೆಂಡನ್ನು ತಡೆಯುವುದು ಅಸಾಧ್ಯ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಶುಭ್ಮನ್ ಗಿಲ್ ತಮ್ಮ ಎಡಭಾಗಕ್ಕೆ ಅದ್ಭುತವಾಗಿ ಡೈವ್ ಮಾಡಿ, ಒಂದೇ ಕೈಯಿಂದ ನೆಲಕ್ಕೆ ತಾಗುವ ಮುನ್ನ ಚೆಂಡನ್ನು ಫ್ಲೈಯಿಂಗ್ ಕ್ಯಾಚ್ ಆಗಿ ಪರಿವರ್ತಿಸಿದರು.
ಇದನ್ನು ನೋಡಿದ ಕಾಮೆಂಟೇಟರ್ಗಳಾದ ಸಂಜಯ್ ಮಂಜ್ರೇಕರ್ ಮತ್ತು ಇಯಾನ್ ಬಿಷಪ್ ಆಶ್ಚರ್ಯಚಕಿತರಾದರು. “ಗಿಲ್ ಈ ಕ್ಯಾಚ್ ಹಿಡಿಯಲು ಯಾವುದೇ ಚಾನ್ಸ್ ಇರಲಿಲ್ಲ, ಇದು ನಂಬಲಾಗದ ಸಾಹಸ” ಎಂದು ಗುಣಗಾನ ಮಾಡಿದರು.
ಇದೀಗ ಗಿಲ್ ಗಿಲಕ್ಕು ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಮ್ ಇಂಡಿಯಾ ನಾಯಕನ ಅದ್ಭುತ ಫೀಲ್ಡಿಂಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಭಾರತ ಮೊದಲ ಇನ್ನಿಂಗ್ಸ್: ದೇವದತ್ ಪಡಿಕ್ಕಲ್ ಅವರ ಆಕರ್ಷಕ 167 ರನ್ ಮತ್ತು ಕೆ.ಎಲ್. ರಾಹುಲ್ ಅವರ ಜವಾಬ್ದಾರಿಯುತ 82 ರನ್ಗಳ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 462 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಶ್ರೀಲಂಕಾ ಮೊದಲ ಇನ್ನಿಂಗ್ಸ್: ಭಾರತದ ಬೌಲಿಂಗ್ ದಾಳಿಗೆ ನಲುಗಿರುವ ಶ್ರೀಲಂಕಾ ಪಡೆ ಭೋಜನ ವಿರಾಮದ ವೇಳೆಗೆ 99 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ. ಇದೇ ರೀತಿಯ ಮಿಂಚಿನ ದಾಳಿ ಸಂಘಟಿಸಿದರೆ ಟೀಮ್ ಇಂಡಿಯಾ ಇಂದೇ ಶ್ರೀಲಂಕಾ ತಂಡವನ್ನು ಆಲೌಟ್ ಮಾಡಬಹುದು. ಅಲ್ಲದೆ ಬೃಹತ್ ಮೊತ್ತದ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು.
ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: 23 ಸೆಕೆಂಡ್ಸ್ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ!
ಶ್ರೀಲಂಕಾ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.