IND vs WI 1st ODI: ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದ ಟೀಮ್ ಇಂಡಿಯಾ
IND vs WI 1st ODI: ಭಾರತ-ವೆಸ್ಟ್ ಇಂಡೀಸ್ ನಡುವಣ 2ನೇ ಏಕದಿನ ಪಂದ್ಯವು ಜುಲೈ 29 ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.
West Indies vs India, 1st ODI: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಭಾರತೀಯ ಬೌಲರ್ಗಳು ಯಶಸ್ವಿಯಾಗಿದ್ದರು. 3ನೇ ಓವರ್ನಲ್ಲಿ ಕೈಲ್ ಮೇಯರ್ಸ್ (2) ವಿಕೆಟ್ ಕಬಳಿಸುವ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಚೊಚ್ಚಲ ಪಂದ್ಯವಾಡಿದ ಮುಖೇಶ್ ಕುಮಾರ್ ಅಲಿಕ್ ಅಥನಾಝ್ ವಿಕೆಟ್ ಕಬಳಿಸಿ ವೈಯುಕ್ತಿಕ ವಿಕೆಟ್ ಖಾತೆ ತೆರೆದರು. ಇದರ ನಡುವೆ ಬ್ರಾಂಡನ್ ಕಿಂಗ್ (2) ಶಾರ್ದೂಲ್ ಠಾಕೂರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ 4ನೇ ವಿಕೆಟ್ಗೆ ಜೊತೆಯಾದ ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ 43 ರನ್ಗಳ ಜೊತೆಯಾಟವಾಡಿದರು. ಈ ನಾಯಕ ರೋಹಿತ್ ಶರ್ಮಾ ಚೆಂಡನ್ನು ಸ್ಪಿನ್ನರ್ ಜಡೇಜಾ ಕೈಗಿತ್ತರು. ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದ ಜಡೇಜಾ ಹೆಟ್ಮೆಯರ್ (11) ರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಇದರ ಬೆನ್ನಲೇ ರೋವ್ಮನ್ ಪೊವೆಲ್ (4) ಹಾಗೂ ರೊಮಾರಿಯೊ ಶೆಫರ್ಡ್ (0) ವಿಕೆಟ್ ಕಬಳಿಸಿ ಜಡೇಜಾ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಈ ಯಶಸ್ಸು ನಡುವೆ ದಾಳಿಗಿಳಿದ ಕುಲ್ದೀಪ್ ಯಾದವ್ ಡೊಮಿನಿಕ್ ಡ್ರೇಕ್ಸ್ (3) ಹಾಗೂ ಯಾನಿಕ್ ಕ್ಯಾರಿಯಾ (3) ಎಲ್ಬಿ ಬಲೆಗೆ ಬೀಳಿಸಿದರು. ಅಷ್ಟೇ ಅಲ್ಲದೆ ಕ್ರೀಸ್ ಕಚ್ಚಿ ನಿಂತಿದ್ದ ಶಾಯ್ ಹೋಪ್ (43) ವಿಕೆಟ್ ಪಡೆದು ಭಾರತಕ್ಕೆ 9ನೇ ಯಶಸ್ಸು ತಂದುಕೊಟ್ಟರು. ಇನ್ನು ಜೇಡನ್ ಸೀಲ್ಸ್ (0) ಬಂದ ಬೆನ್ನಲ್ಲೇ ಕ್ಯಾಚಿತ್ತರು.
ಇದರೊಂದಿಗೆ ವೆಸ್ಟ್ ಇಂಡೀಸ್ ತಂಡವು 23 ಓವರ್ಗಳಲ್ಲಿ ಕೇವಲ 114 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 3 ಓವರ್ಗಳಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು.
ಇನ್ನು 115 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಜೊತೆ ರೋಹಿತ್ ಶರ್ಮಾ ಬದಲು ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಿದ್ದರು. 4 ಓವರ್ಗಳಲ್ಲಿ 18 ರನ್ಗಳಿಸಿದ್ದ ವೇಳೆ ಶುಭ್ಮನ್ ಗಿಲ್ (7) ನೀಡಿ ಹೊರನಡೆದರು. ಈ ವೇಳೆ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಇಶಾನ್ ಕಿಶನ್ ಜೊತೆಗೂಡಿ ಉತ್ತಮ ಜೊತೆಯಾಟವಾಡಿದರು.
ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಗುಡಕೇಶ್ ಮೋಟಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಸೂರ್ಯಕುಮಾರ್ ಯಾದವ್ (19) ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ (5) ರನೌಟ್ ಆಗಿ ಹೊರ ನಡೆದರು.
ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅರ್ಧಶತಕ ಬೆನ್ನಲ್ಲೇ ಸಿಕ್ಸ್ ಸಿಡಿಸುವ ಯತ್ನದಲ್ಲಿ ಇಶಾನ್ (52) ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದರು. ಇನ್ನು ಬಡ್ತಿ ಪಡೆದು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಶಾರ್ದೂಲ್ ಠಾಕೂರ್ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ (12) ರವೀಂದ್ರ ಜಡೇಜಾ (16) ಜೊತೆಗೂಡಿ 21 ರನ್ಗಳಿಸುವ ಮೂಲಕ 22.5 ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು ಗುರಿಮುಟ್ಟಿಸಿದರು. ಈ ಮೂಲಕ ಟೀಮ್ ಇಂಡಿಯಾ 5 ವಿಕೆಟ್ಗಳ ಜಯ ಸಾಧಿಸಿತು.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಶಾಯ್ ಹೋಪ್ (ನಾಯಕ) , ಕೈಲ್ ಮೇಯರ್ಸ್ , ಬ್ರಾಂಡನ್ ಕಿಂಗ್ , ಅಲಿಕ್ ಅಥಾನಾಝ್ , ಶಿಮ್ರಾನ್ ಹೆಟ್ಮೆಯರ್ , ರೋವ್ಮನ್ ಪೊವೆಲ್ , ರೊಮಾರಿಯೋ ಶೆಫರ್ಡ್ , ಯಾನಿಕ್ ಕ್ಯಾರಿಯಾ , ಡೊಮಿನಿಕ್ ಡ್ರೇಕ್ಸ್ , ಜೇಡನ್ ಸೀಲ್ಸ್ , ಗುಡಕೇಶ್ ಮೋಟಿ.
ಇದನ್ನೂ ಓದಿ: Ravindra Jadeja: 30 ವರ್ಷಗಳ ಹಳೆಯ ದಾಖಲೆ ಮುರಿದ ರವೀಂದ್ರ ಜಡೇಜಾ
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ವಿರಾಟ್ ಕೊಹ್ಲಿ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ , ಸೂರ್ಯಕುಮಾರ್ ಯಾದವ್ , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಉಮ್ರಾನ್ ಮಲಿಕ್ , ಮುಖೇಶ್ ಕುಮಾರ್.
Published On - 11:13 pm, Thu, 27 July 23