ಭಾರತ-ವೆಸ್ಟ್ ಇಂಡೀಸ್ (IND vs WI 3rd T20) ನಡುವಣ 3ನೇ ಟಿ20 ಪಂದ್ಯ ಇಂದು ನಡೆಯಲಿದೆ. ಸೇಂಟ್ ಕಿಟ್ಸ್ನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಟೀಮ್ ಇಂಡಿಯಾ (Team India). ಏಕೆಂದರೆ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾವನ್ನು 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಹೀನಾಯವಾಗಿ ಸೋಲಿಸಿದೆ. ಇದೀಗ ಅದೇ ಮೈದಾನದಲ್ಲಿ 3ನೇ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಜಯಿಸುವ ಮತ್ತೆ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ ರೋಹಿತ್ ಶರ್ಮಾ ಪಡೆ. ಇದಕ್ಕಾಗಿ ಟೀಮ್ ಇಂಡಿಯಾದಲ್ಲಿ 2 ಪ್ರಮುಖ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಏಕೆಂದರೆ ಮೊದಲ ಎರಡು ಪಂದ್ಯಗಳಿಂದ ಟೀಮ್ ಇಂಡಿಯಾದ ಇನ್ಫಾರ್ಮ್ ಆಟಗಾರ ದೀಪಕ್ ಹೂಡಾ ಹೊರಗುಳಿದಿದ್ದರು. ಮತ್ತೊಂದೆಡೆ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಅಂದರೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅಯ್ಯರ್ 2ನೇ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ಅತ್ತ ಭರ್ಜರಿ ಫಾರ್ಮ್ನಲ್ಲಿರುವ ದೀಪಕ್ ಹೂಡಾ ಬೆಂಚ್ ಕಾಯುತ್ತಿದ್ದು, ಹೀಗಾಗಿ ಅಯ್ಯರ್ ಬದಲಿಗೆ 3ನೇ ಪಂದ್ಯದಲ್ಲಿ ಹೂಡಾ ಕಣಕ್ಕಿಳಿಯುವ ಸಾಧ್ಯತೆಯಿದೆ.
ಹಾಗೆಯೇ ಬೌಲಿಂಗ್ ವಿಭಾಗದಲ್ಲೂ ಒಂದು ಬದಲಾವಣೆ ಕಂಡು ಬರಲಿದೆ ಎನ್ನಬಹುದು. 2ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವೇಗಿ ಅವೇಶ್ ಖಾನ್ ದುಬಾರಿಯಾಗಿದ್ದರು. ಅದರಲ್ಲೂ ಕೊನೆಯ ಓವರ್ನಲ್ಲಿ 10 ರನ್ ಬೇಕಿದ್ದ ವೇಳೆ ನೋಬಾಲ್ ಎಸೆಯುವ ಮೂಲಕ ವೆಸ್ಟ್ ಇಂಡೀಸ್ ತಂಡವು ಸುಲಭವಾಗಿ ಗೆಲ್ಲುವಂತೆ ಮಾಡಿದ್ದರು. ಹೀಗಾಗಿ ಅವೇಶ್ ರನ್ನು ಮೂರನೇ ಪಂದ್ಯದಿಂದ ಹೊರಗಿಡುವ ಸಾಧ್ಯತೆಯಿದೆ.
ಬದಲಿಗೆ ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯಬಹುದು. ಕಳೆದ ಎರಡು ಪಂದ್ಯಗಳಿಂದ ಹರ್ಷಲ್ ಪಟೇಲ್ ಹೊರಗುಳಿದಿದ್ದು, ಹೀಗಾಗಿ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ಟೀಮ್ ಇಂಡಿಯಾ ಈ ಎರಡು ಬದಲಾವಣೆಯೊಂದಿಗೆ ವೆಸ್ಟ್ ಇಂಡೀಸ್ ತಂಡವನ್ನು ಮೂರನೇ ಪಂದ್ಯದಲ್ಲಿ ಎದುರಿಸಲಿದೆ.
ಟೀಮ್ ಇಂಡಿಯಾ ಸಂಭಾವ್ಯ ಇಲೆವೆನ್:
ರೋಹಿತ್ ಶರ್ಮಾ (ನಾಯಕ) , ಸೂರ್ಯಕುಮಾರ್ ಯಾದವ್ , ದೀಪಕ್ ಹೂಡಾ, ರಿಷಬ್ ಪಂತ್ ( ವಿಕೆಟ್ ಕೀಪರ್ ) , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ) , ರಿಷಬ್ ಪಂತ್ ( ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಅವೇಶ್ ಖಾನ್ , ಅರ್ಷದೀಪ್ ಸಿಂಗ್ , ರವಿ ಬಿಷ್ಣೋಯ್ , ಸಂಜು ಸ್ಯಾಮ್ಸನ್ , ಹರ್ಷಲ್ ಪಟೇಲ್ , ದೀಪಕ್ ಹೂಡಾ, ಕುಲ್ದೀಪ್ ಯಾದವ್.