IND vs WI: ಸ್ಯಾಮ್ಸನ್​ಗೆ ಅವಕಾಶ? ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ ಹೀಗಿದೆ

|

Updated on: Jul 24, 2023 | 12:16 PM

IND vs WI ODI Series: ವಿಶ್ವಕಪ್ ದೃಷ್ಟಿಯಿಂದ ಪೂರ್ಣ ಪ್ರಮಾಣದ ತಂಡದೊಂದಿಗೆ ಕಣಕ್ಕಿಳಿಯುವ ಸಿದ್ದತೆಯಲ್ಲಿರುವ ಟೀಂ ಇಂಡಿಯಾದಲ್ಲಿ ಯಾರಿಗೆ ಆಡುವ ಅವಕಾಶ ಸಿಗುತ್ತದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

IND vs WI: ಸ್ಯಾಮ್ಸನ್​ಗೆ ಅವಕಾಶ? ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ ಹೀಗಿದೆ
ಟೀಂ ಇಂಡಿಯಾ
Image Credit source: insidesport
Follow us on

ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾ (India vs West Indies), ಸರಣಿ ಗೆಲುವಿನ ಹೊಸ್ತಿಲಿನಲ್ಲಿದೆ. ಇದರೊಂದಿಗೆ ಮೂರನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ ಶಿಪ್​​ನಲ್ಲಿ ಶುಭಾರಂಭ ಮಾಡಲಿದೆ. ಈ ಸರಣಿಯ ಬಳಿಕ ವಿಂಡೀಸ್ ವಿರುದ್ಧವೇ ಟೀಂ ಇಂಡಿಯಾ (Team India) ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಬಾರಿಯ ಏಷ್ಯಾಕಪ್ (Asia Cup) ಕೂಡ ಏಕದಿನ ಮಾದರಿಯಲ್ಲಿ ನಡೆಯುತ್ತಿದ್ದು, ಈ ಪಂದ್ಯಾವಳಿಯ ಬಳಿಕ ಪ್ರತಿಷ್ಠಿತ ಏಕದಿನ ವಿಶ್ವಕಪ್ (ODI World Cup)​ ಕೂಡ ಭಾರತದಲ್ಲಿ ನಡೆಯಲ್ಲಿದೆ. ಹೀಗಾಗಿ ತವರಿನಲ್ಲಿ ನಡೆಯಲ್ಲಿರುವ ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಟೀಂ ಇಂಡಿಯಾ ವೆಸ್ಟ್ ವಿಂಡೀಸ್ ವಿರುದ್ಧದ ಈ ಏಕದಿನ ಸರಣಿಯಿಂದಲೇ ತನ್ನ ತಯಾರಿಯನ್ನು ಆರಂಭಿಸುತ್ತಿದೆ. ಹೀಗಾಗಿ ಪೂರ್ಣ ಪ್ರಮಾಣದ ತಂಡದೊಂದಿಗೆ ಕಣಕ್ಕಿಳಿಯುವ ಸಿದ್ದತೆಯಲ್ಲಿರುವ ಟೀಂ ಇಂಡಿಯಾದಲ್ಲಿ ಯಾರಿಗೆ ಆಡುವ ಅವಕಾಶ ಸಿಗುತ್ತದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಅಂತಹ ಪ್ರಶ್ನೆಗಳಿಗೆಲ್ಲ ಇಲ್ಲಿದೆ ಉತ್ತರ.

ಆರಂಭಿಕರಾಗಿ ರೋಹಿತ್- ಗಿಲ್

ವಿಶ್ವಕಪ್ ದೃಷ್ಟಿಯಿಂದ ನೋಡುವುದಾದರೆ ಟೀಂ ಇಂಡಿಯಾದ ಮೊದಲೆರಡು ಸ್ಥಾನ ಅಂದರೆ, ಆರಂಭಿಕ ಸ್ಥಾನ ಈಗಾಗಲೆ ಭರ್ತಿಯಾಗಿದೆ. ಅದರ ಪ್ರಕಾರ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. ಇವರಲ್ಲದೆ ಹೆಚ್ಚುವರಿ ಆರಂಭಿಕರಾಗಿ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಕೂಡ ಸ್ಪರ್ಧೆಯಲ್ಲಿದ್ದಾರೆ.

Ishan Kishan: ಧೋನಿ ದಾಖಲೆ ಉಡೀಸ್; ವೇಗದ ಟೆಸ್ಟ್ ಅರ್ಧಶತಕ ಸಿಡಿಸಿ ಕಿಶನ್ ಬರದ ದಾಖಲೆಗಳಿವು

ಮಧ್ಯಮ ಕ್ರಮಾಂಕದಲ್ಲಿ ಯಾರು?

ಇನ್ನು ಮಧ್ಯಮ ಕ್ರಮಾಂಕದ ವಿಷಯಕ್ಕೆ ಬಂದರೆ, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಖಚಿತ. ಇವರೊಂದಿಗೆ ವಿಕೆಟ್‌ಕೀಪರ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ಬಲಗೈ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಈ ಇಬ್ಬರಲ್ಲಿ ಯಾರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈ ಇಬ್ಬರಲ್ಲಿ ಇಶಾನ್ ಕಿಶನ್ ಕೊಂಚ ಮೇಲುಗೈ ಸಾಧಿಸಿದ್ದಾರೆ. ಇದಕ್ಕೆ ಕಾರಣವೂ ಇದ್ದು, ಪ್ರಸ್ತುತ ಟೀಂ ಇಂಡಿಯಾದಲ್ಲಿರುವ ಅಗ್ರ ಆರು ಬ್ಯಾಟರ್​ಗಳಲ್ಲಿ ಇರುವ ಏಕೈಕ ಎಡಗೈ ಬ್ಯಾಟರ್ ಎಂದರೆ ಅದು ಇಶಾನ್ ಕಿಶನ್. ಅಲ್ಲದೆ ತಂಡದ ಮೊದಲ ಆಯ್ಕೆಯ ವಿಕೆಟ್-ಕೀಪರ್ ಕೂಡ ಕಿಶನ್ ಆಗಿದ್ದಾರೆ.

ಆದರೆ, ನಿಜ ಹೇಳಬೇಕೆಂದರೆ, ಇಶಾನ್ ಕಿಶನ್ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರನಲ್ಲ. ಅವರೇನಿದ್ದರು ಆರಂಭಿಕರಾಗಿ ಆಡಲು ಸೂಕ್ತ ಎಂಬುದು ಈಗಾಗಲೇ ಸಾಭೀತಾಗಿದೆ. ಹೀಗಾಗು ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ಸರಣಿಯಲ್ಲಿ ಕೀಪರ್ ಆಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ

ಮ್ಯಾಚ್ ಫಿನಿಶಿಂಗ್ ಜವಬ್ದಾರಿ ಯಾರಿಗೆ?

ಬ್ಯಾಟಿಂಗ್ ಕ್ರಮಾಂಕವನ್ನು ಹೊರತುಪಡಿಸಿ, ಫಿನಿಶರ್‌ಗಳ ವಿಚಾರಕ್ಕೆ ಬಂದರೆ, ತಂಡದ ಫಿನಿಶರ್‌ಗಳಾದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಆದರೆ ಕಳೆದ ಏಕದಿನ ಸರಣಿಯುದ್ದಕ್ಕೂ ಶೂನ್ಯ ಸಾಧನೆ ಮಾಡಿದ್ದ ಸೂರ್ಯಕುಮಾರ್ ಯಾದವ್ ಎಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಬೌಲಿಂಗ್ ಜವಬ್ದಾರಿ ಯಾರಿಗೆ?

ಅಂತಿಮವಾಗಿ, ಬೌಲರ್‌ಗಳ ವಿಷಯಕ್ಕೆ ಬಂದಾಗ, ಕುಲ್ದೀಪ್ ಯಾದವ್ ಟೀಂ ಇಂಡಿಯಾದ ಸ್ಪಿನ್ ವಿಭಾಗವನ್ನು ಮುನ್ನಡೆಸುವುದು ಖಚಿತ. ಮತ್ತೊಂದೆಡೆ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ವೇಗಿಗಳಾಗಿ ಕಾಣಿಸಿಕೊಳ್ಳಲ್ಲಿದ್ದು, ಈ ಅನುಭವಿಗಳೊಂದಿಗೆ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಜಯದೇವ್ ಉನದ್ಕಟ್, ಮುಖೇಶ್ ಕುಮಾರ್ ಅಥವಾ ಉಮ್ರಾನ್ ಮಲಿಕ್ ಅವರಲ್ಲಿ ಒಬ್ಬರು ತಂಡದ ಮೂರನೇ ವೇಗಿಯಾಗಿ ಸ್ಥಾನ ಪಡೆಯಲ್ಲಿದ್ದಾರೆ. ಇತ್ತೀಚಿನ ಏಕದಿನ ಸರಣಿಯಲ್ಲಿ ಉಮ್ರಾನ್ ಮಲಿಕ್ ಅದ್ಭುತ ಪ್ರದರ್ಶನ ನೀಡಿದ್ದರು. ಆದ್ದರಿಂದ ಉಮ್ರಾನ್ ಮಲಿಕ್ ಅವರು ತಂಡದ ಮೂರನೇ ವೇಗಿಯಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Mon, 24 July 23