Mohammad Siraj: ಅದ್ಭುತ ಕ್ಯಾಚ್ ಹಿಡಿದ ಸೂಪರ್ಮ್ಯಾನ್ ಸಿರಾಜ್
India vs West Indies 1st Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಭೋಜನ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡು 68 ರನ್ಗಳಿಸಿದೆ.

India vs West Indies 1st Test: ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಕ್ರೈಗ್ ಬ್ರಾಥ್‌ವೈಟ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ತೇಜ್ನರೈನ್ ಚಂದ್ರಪಾಲ್ ಹಾಗು ಬ್ರಾಥ್‌ವೈಟ್ ಮೊದಲ ವಿಕೆಟ್ಗೆ 31 ರನ್ ಪೇರಿಸಿದ್ದರು. ಈ ಹಂತದಲ್ಲಿ ತೇಜ್ನರೈನ್ (12) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಅಶ್ವಿನ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ಕ್ರೈಗ್ ಬ್ರಾಥ್‌ವೈಟ್ (20) ಕೂಡ ಅಶ್ವಿನ್ ಎಸೆತದಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಹೊರನಡೆದರು. ಆ ಬಳಿಕ ಬಂದ ರೇಮನ್ ರೀಫರ್ (2) ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕೀಪರ್ಗೆ ಕ್ಯಾಚಿತ್ತರು. ಈ ಹಂತದಲ್ಲಿ ಜೊತೆಯಾದ ಜೆರ್ಮೈನ್ ಬ್ಲಾಕ್‌ವುಡ್ ಹಾಗೂ ಅಲಿಕ್ ಅಥಾನಾಝೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಆದರೆ ಜಡೇಜಾ ಎಸೆದ 28ನೇ ಓವರ್ನ ಕೊನೆಯ ಎಸೆತದಲ್ಲಿ ಬ್ಲಾಕ್‌ವುಡ್ ಮಿಡ್ ಆಫ್ನತ್ತ ಬೌಂಡರಿ ಬಾರಿಸಲು ಯತ್ನಿಸಿದ್ದರು.
ಆದರೆ 30 ಯಾರ್ಡ್ ಸರ್ಕಲ್ನಲ್ಲೇ ಫೀಲ್ಡಿಂಗ್ನಲ್ಲಿದ್ದ ಮೊಹಮ್ಮದ್ ಸಿರಾಜ್ ಓಡಿ ಹೋಗಿ ಗಾಳಿಯಲ್ಲಿ ಹಾರಿ ಅದ್ಭುತವಾಗಿ ಚೆಂಡನ್ನು ಹಿಡಿದರು. ಅಲ್ಲಿಗೆ ಜೆರ್ಮೈನ್ ಬ್ಲಾಕ್‌ವುಡ್ (14) ಇನಿಂಗ್ಸ್ ಅಂತ್ಯವಾಯಿತು. ಇದೀಗ ಸಿರಾಜ್ ಅವರ ಈ ಅತ್ಯದ್ಭುತ ಕ್ಯಾಚ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಟೀಮ್ ಇಂಡಿಯಾ ವೇಗಿಯ ಈ ಪ್ರಯತ್ನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Miyaan Bhai ki daring ? #INDvWIonFanCode #WIvIND pic.twitter.com/LUdvAmmbVr
— FanCode (@FanCode) July 12, 2023
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಭೋಜನ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡು 68 ರನ್ಗಳಿಸಿದೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ತೇಜ್ನರೈನ್ ಚಂದ್ರಪಾಲ್ , ರೇಮನ್ ರೀಫರ್ , ಜೆರ್ಮೈನ್ ಬ್ಲಾಕ್‌ವುಡ್ , ಅಲಿಕ್ ಅಥಾನಾಝ್ , ಜೋಶುವಾ ಡಾ ಸಿಲ್ವಾ (ವಿಕೆಟ್) , ಜೇಸನ್ ಹೋಲ್ಡರ್ , ರಹಕೀಮ್ ಕಾರ್ನ್‌ವಾಲ್ , ಅಲ್ಝಾರಿ ಜೋಸೆಫ್ , ಕೆಮರ್ ರೋಚ್ , ಜೋಮೆಲ್ ವಾರಿಕನ್.
ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಅಜಿಂಕ್ಯ ರಹಾನೆ , ರವೀಂದ್ರ ಜಡೇಜಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್ , ಜಯದೇವ್ ಉನಾದ್ಕತ್ , ಮೊಹಮ್ಮದ್ ಸಿರಾಜ್.
