Rohit Sharma Century: ಕೆರಿಬಿಯನ್ ನಾಡಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಹಿಟ್ಮ್ಯಾನ್ ರೋಹಿತ್..!
IND vs WI: ಸರಿಯಾಗಿ 10 ವರ್ಷಗಳ ನಂತರ, ರೋಹಿತ್ ಮತ್ತೊಮ್ಮೆ ವಿಂಡೀಸ್ ವಿರುದ್ಧ ಶತಕ ಬಾರಿಸಿದ್ದು, ತಮ್ಮ ಟೆಸ್ಟ್ ವೃತ್ತಿಜೀವನದ 10 ನೇ ಶತಕವನ್ನು ಪೂರೈಸಿದ್ದಾರೆ.
ಬಹಳ ದಿನಗಳಿಂದ ರನ್ ಬರ ಎದುರಿಸುತ್ತಿದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ವೆಸ್ಟ್ ಇಂಡೀಸ್ ವಿರುದ್ಧದ (India vs West Indies) ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವುದರೊಂದಿಗೆ ತಮ್ಮ ಹಳೆ ಲಯಕ್ಕೆ ಮರಳಿದ್ದಾರೆ. 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ, ಕೋಲ್ಕತ್ತಾದಲ್ಲಿ ನಡೆದ ಆ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು. ಇದೀಗ 10 ವರ್ಷಗಳ ನಂತರ ವಿಂಡೀಸ್ ತಂಡದ ವಿರುದ್ಧ ಮತ್ತೊಂದು ಶತಕ ಸಿಡಿಸಿದ್ದಾರೆ. ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಲು ಸಹ ರೋಹಿತ್ ಶರ್ಮಾ ಅವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಡೊಮಿನಿಕಾದ (Dominica) ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನ ವೇಗದ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ನೀಡಿದ್ದ ರೋಹಿತ್ , ಎರಡನೇ ದಿನ ಸಂಯಮದಿಂದ ಬ್ಯಾಟಿಂಗ್ ಮಾಡಿ ಸ್ಮರಣೀಯ ಶತಕ ಬಾರಿಸಿದ್ದಾರೆ. ಅಲ್ಲದೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರೊಂದಿಗೆ ಇನ್ನೂರಕ್ಕೂ ಹೆಚ್ಚು ರನ್ಗಳ ಜೊತೆಯಾಟವನ್ನೂ ಹಂಚಿಕೊಂಡಿದ್ದಾರೆ.
10 ವರ್ಷಗಳಲ್ಲಿ 10ನೇ ಟೆಸ್ಟ್ ಶತಕ
10 ವರ್ಷಗಳ ಹಿಂದೆ 2013ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ರೋಹಿತ್ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ್ದ ರೋಹಿತ್, ಆ ಬಳಿಕ ನಡೆದ ಎರಡನೇ ಟೆಸ್ಟ್‌ನಲ್ಲೂ ಮತ್ತೊಂದು ಶತಕ ಬಾರಿಸಿದ್ದರು. ಇದೀಗ ಸರಿಯಾಗಿ 10 ವರ್ಷಗಳ ನಂತರ, ರೋಹಿತ್ ಮತ್ತೊಮ್ಮೆ ವಿಂಡೀಸ್ ವಿರುದ್ಧ ಶತಕ ಬಾರಿಸಿದ್ದು, ತಮ್ಮ ಟೆಸ್ಟ್ ವೃತ್ತಿಜೀವನದ 10 ನೇ ಶತಕವನ್ನು ಪೂರೈಸಿದ್ದಾರೆ.
IND vs WI: ಟಿ20 ಕೆರಿಯರ್ ಅಂತ್ಯ? ಸತತ ನಾಲ್ಕನೇ ಟಿ20 ಸರಣಿಯಿಂದ ರೋಹಿತ್-ವಿರಾಟ್ ನಾಪತ್ತೆ..!
ವಿಂಡೀಸ್ನಲ್ಲಿ ರೋಹಿತ್ ಮೊದಲ ಶತಕ
ಎರಡನೇ ಸೆಷನ್‌ನಲ್ಲಿ ರೋಹಿತ್ ಅಲಿಕ್ ಎತಾನಾಜೆ ಅವರ ಚೆಂಡನ್ನು ಕವರ್ಸ್ ಕಡೆಗೆ ಆಡಿ ಬೌಂಡರಿ ಬಾರಿಸುವುದರೊಂದಿಗೆ ತಮ್ಮ ಶತಕವನ್ನು ಪೂರ್ಣಗೊಳಿಸಿದರು. 220 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ರೋಹಿತ್ಗೆ ಈ ವರ್ಷದಲ್ಲಿ ಇದು ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದರು. ಇದೀಗ ವಿಂಡೀಸ್ ನೆಲದಲ್ಲಿ ಶತಕ ಸಿಡಿಸಿರುವ ರೋಹಿತ್ಗೆ ಕೆರಿಬಿಯನ್ ನಾಡಲ್ಲಿ ಇದು ಅವರ ಮೊದಲ ಶತಕ ಎಂಬುದು ಇನ್ನಷ್ಟು ವಿಶೇಷವಾಗಿದೆ.
ಆದರೆ, ಶತಕ ಪೂರೈಸಿದ ಮುಂದಿನ ಎಸೆತದಲ್ಲಿಯೇ ರೋಹಿತ್ ವಿಕೆಟ್ (221 ಎಸೆತಗಳಲ್ಲಿ 103 ರನ್) ಒಪ್ಪಿಸಿದರು. ವೆಸ್ಟ್ ಇಂಡೀಸ್ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಡೊಮಿನಿಕಾದ ಸ್ಥಳೀಯ ಆಟಗಾರ ಅಲಿಕ್ ಅಥ್ನೆಜ್, ರೋಹಿತ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಹಲವು ದಾಖಲೆ ಬರೆದ ರೋಹಿತ್
ರೋಹಿತ್ ಅವರ ಈ ಶತಕ ಹಲವು ಕಾರಣಗಳಿಂದ ಅವರಿಗೆ ವಿಶೇಷವಾಗಿತ್ತು. ಇದು ವಿದೇಶಿ ನೆಲದಲ್ಲಿ ರೋಹಿತ್ ಅವರ ಎರಡನೇ ಟೆಸ್ಟ್ ಶತಕವಾಗಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು (7) ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಹಿಟ್ಮ್ಯಾನ್ ಬರೆದಿದ್ದಾರೆ. ಅಲ್ಲದೆ ಆರಂಭಿಕರಾಗಿ ಈ 7 ಶತಕಗಳನ್ನು ಸಿಡಿಸಿರುವುದು ವಿಶೇಷವಾಗಿದೆ. ಹಾಗೆಯೇ ಆರಂಭಿಕರಾಗಿ ವಿದೇಶಿ ನೆಲದಲ್ಲಿ ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆಯನ್ನು ಸಹ ರೋಹಿತ್ ಬರೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:06 am, Fri, 14 July 23