India vs Zimbabwe: ಜಿಂಬಾಬ್ವೆ ವಿರುದ್ದದ ಸರಣಿಗಾಗಿ (IND vs ZIM) ಟೀಮ್ ಇಂಡಿಯಾ (Team India) ಹರಾರೆಗೆ ಬಂದಿಳಿದಿದೆ. ಮೂರು ಪಂದ್ಯಗಳ ಏಕದಿನ ಸರಣಿ ಆಗಸ್ಟ್ 18 ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನ ಭಾರತೀಯ ಆಟಗಾರರಿಗೆ ಸ್ನಾನದ ವಿಷಯವಾಗಿ ಬಿಸಿಸಿಐ ಖಡಕ್ ಸೂಚನೆಯೊಂದನ್ನು ನೀಡಿದೆ. ಈ ಸೂಚನೆಯಲ್ಲಿ ಅನಿವಾರ್ಯತೆಯಿದ್ದಾಗ ಮಾತ್ರ ಸ್ನಾನ ಮಾಡುವಂತೆ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ದೀರ್ಘಕಾಲ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹದೊಂದು ಆದೇಶ ಹೊರಡಿಸಲು ಮುಖ್ಯ ಕಾರಣ ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿನ ತೀವ್ರ ನೀರಿನ ಕೊರತೆ.
ಹರಾರೆಯ ಹಲವು ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ನೀರನ್ನು ವಿನಾಕಾರಣ ಪೋಲು ಮಾಡದಂತೆ ಬಿಸಿಸಿಐ ತಿಳಿಸಿದೆ. ಸಾಮಾನ್ಯವಾಗಿ ಆಟಗಾರರು ಒತ್ತಡದ ಸಂದರ್ಭಗಳಲ್ಲಿ ಶವರ್ ಕೆಳಗೆ ನಿಂತುಕೊಳ್ಳುವ ಅಭ್ಯಾಸವಿದೆ. ಅದರಲ್ಲೂ ಔಟಾಗಿ ಬಂದಂತಹ ಸಂದರ್ಭಗಳಲ್ಲೂ ಕೆಲ ಆಟಗಾರರು ಶವರ್ ಕೆಳಗೆ ನಿಂತು ಒತ್ತಡವನ್ನು ನಿಯಂತ್ರಿಸಲು ಮುಂದಾಗುತ್ತಾರೆ. ಇದೇ ಕಾರಣದಿಂದಾಗಿ ಅನಿವಾರ್ಯತೆಯಿದ್ದಾಗ ಮಾತ್ರ ಆಟಗಾರರು ಸ್ನಾನ ಮಾಡುವಂತೆ ಬಿಸಿಸಿಐ ಸೂಚಿಸಿದೆ.
ವರದಿಗಳ ಪ್ರಕಾರ ನಗರದ ಜಿಂಬಾಬ್ವೆ ರಾಜಧಾನಿಯ ಹಲವು ಪ್ರದೇಶಗಳಲ್ಲಿ ನೀರಿಲ್ಲ. ಕಳೆದ 3-4 ದಿನಗಳಿಂದ ಜನರು ಕುಡಿಯುವ ನೀರಿನ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಹರಾರೆಯಲ್ಲಿನ ಈ ಸಮಸ್ಯೆಯನ್ನು ಪರಿಗಣಿಸಿ ಬಿಸಿಸಿಐ ಆಟಗಾರರಿಗೆ ಶೀಘ್ರ ಸ್ನಾನ ಮುಗಿಸಬೇಕೆಂದು ತಾಕೀತು ಮಾಡಿದೆ. ಅಲ್ಲದೆ ಈ ಮೂಲಕ ನೀರನ್ನು ಉಳಿಸುವಂತೆ ಕೆಎಲ್ ರಾಹುಲ್ ಪಡೆಗೆ ಸಲಹೆ ನೀಡಿದೆ.
ಹರಾರೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಆಟಗಾರರಿಗೆ ಮಾಹಿತಿ ನೀಡಲಾಗಿದೆ. ನೀರು ಪೋಲಾಗುವುದನ್ನು ತಪ್ಪಿಸುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ಸ್ನಾನಕ್ಕೆ ಹೆಚ್ಚು ನೀರು ಬಳಸದಂತೆ ಮನವಿ ಮಾಡಿದ್ದೇವೆ. ಇದಲ್ಲದೆ, ಹರಾರೆಯಲ್ಲಿ ಯಾವುದೇ ಆಟಗಾರರಿಗೂ ಪೂಲ್ ಸೆಷನ್ ಕೂಡ ನೀಡಲಾಗುತ್ತಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೀಮ್ ಇಂಡಿಯಾ ವಿದೇಶಿ ಪ್ರವಾಸದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2018 ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಇಂತಹದ್ದೇ ಸಮಸ್ಯೆ ಎದುರಿಸಿತ್ತು. ಕೇಪ್ ಟೌನ್ ನ ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾದಾಗ, ಆಗಲೂ ಬಿಸಿಸಿಐ ನೀರನ್ನು ಸರಿಯಾಗಿ ಬಳಸಿಕೊಳ್ಳುವಂತೆ ಆಟಗಾರರಿಗೆ ಸೂಚಿಸಿತ್ತು.
ಇದೀಗ ಹರಾರೆಯ ನೀರಿನ ಸಮಸ್ಯೆಯು ಅತ್ಯಂತ ಕೆಟ್ಟ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಜವಾಬ್ದಾರಿಯುತವಾಗಿ ನೀರನ್ನು ಬಳಸುವಂತೆ ಬಿಸಿಸಿಐ ಆಟಗಾರರಲ್ಲಿ ಮನವಿ ಮಾಡಿದೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿ ಆಗಸ್ಟ್ 18 ರಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಆಗಸ್ಟ್ 20ರಂದು ನಡೆಯಲಿದೆ. ಮೂರನೇ ಏಕದಿನ ಪಂದ್ಯ ಆಗಸ್ಟ್ 22 ರಂದು ನಡೆಯಲಿದೆ. ಈ ಮೂರು ಪಂದ್ಯಗಳು ಹರಾರೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೀಗಾಗಿ ಇನ್ನೊಂದು ವಾರ ಸ್ನಾನದ ವೇಳೆ ನೀರು ಪೋಲಾಗುವುದನ್ನು ತಡೆಯಲು ಆಟಗಾರರಿಗೆ ಬಿಸಿಸಿಐ ಸೂಚಿಸಿದೆ.
ಜಿಂಬಾಬ್ವೆ ಸರಣಿಗೆ ಭಾರತ ತಂಡ (India Squad): ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್, ಶಹಬಾಜ್ ಅಹ್ಮದ್.