Harmanpreet Kaur Fined: ಅಂಪೈರ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ ಹರ್ಮನ್​ಗೆ ಭಾರಿ ದಂಡದ ಬರೆ ಎಳೆದ ಐಸಿಸಿ..!

|

Updated on: Jul 23, 2023 | 1:37 PM

Harmanpreet Kaur Fined: ಹರ್ಮನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವ ಐಸಿಸಿ, ಕೌರ್ ಅವರ ಪಂದ್ಯ ಶುಲ್ಕದಲ್ಲಿ ಶೇ.75ರಷ್ಟು ಹಣವನ್ನು ದಂಡವಾಗಿ ಕಡಿತಗೊಳಿಸಿದೆ ಎಂದು ವರದಿಯಾಗಿದೆ.

Harmanpreet Kaur Fined: ಅಂಪೈರ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ ಹರ್ಮನ್​ಗೆ ಭಾರಿ ದಂಡದ ಬರೆ ಎಳೆದ ಐಸಿಸಿ..!
ಹರ್ಮನ್‌ಪ್ರೀತ್ ಕೌರ್
Follow us on

ಬಾಂಗ್ಲಾದೇಶ ವಿರುದ್ಧದ (India vs Bangladesh) ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಂಪೈರ್ ನೀಡಿದ್ದ ನಿರ್ಣಯದ ವಿರುದ್ಧ ಮೈದಾನದಲ್ಲಿ ಅಸಮಾಧಾನ ಹೊರಹಾಕಿದ್ದು ಸಾಲದೆಂಬಂತೆ, ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್​ನಲ್ಲಿ ಅಂಪೈರಿಂಗ್ ವಿರುದ್ಧ ಕಿಡಿಕಾರಿದ್ದ ಭಾರತ ಮಹಿಳಾ ತಂಡದ (Team India) ನಾಯಕಿ ಹರ್ಮನ್‌ಪ್ರೀತ್ ಕೌರ್​ಗೆ (Harmanpreet Kaur) ಐಸಿಸಿ ಭಾರಿ ದಂಡ ವಿಧಿಸಿದೆ. ಹರ್ಮನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವ ಐಸಿಸಿ (ICC), ಕೌರ್ ಅವರ ಪಂದ್ಯ ಶುಲ್ಕದಲ್ಲಿ ಶೇ.75ರಷ್ಟು ಹಣವನ್ನು ದಂಡವಾಗಿ ಕಡಿತಗೊಳಿಸಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹರ್ಮನ್‌ಪ್ರೀತ್ ಅಂಪೈರಿಂಗ್ ಅನ್ನು ಪ್ರಶ್ನಿಸಿದ್ದಲ್ಲದೆ, ಬ್ಯಾಟ್‌ನಿಂದ ವಿಕೆಟ್‌ಗೆ ಹೊಡೆದು ತಮ್ಮ ಆಕ್ರೋಶ ಹೊರಹಾಕಿದ್ದರು. ಇದೀಗ ಕೌರ್ ವರ್ತನೆಯ ಬಗ್ಗೆ ಮ್ಯಾಚ್ ರೆಫರಿ ಐಸಿಸಿಗೆ ವರದಿ ನೀಡಿದ್ದು, ನಿಯಮದ ಪ್ರಕಾರ ಹರ್ಮನ್‌ಪ್ರೀತ್ ಕೌರ್ ಲೆವೆಲ್ 2 ರಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯವು ಜುಲೈ 22 ರಂದು ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಉಭಯ ತಂಡಗಳ ನಡುವೆ ನಡೆದ ಪಂದ್ಯ ಟೈ ಆಗಿದ್ದು, ನಂತರ ಎರಡೂ ತಂಡವನ್ನು ಜಂಟಿಯಾಗಿ ಸರಣಿ ವಿಜೇತರೆಂದು ಘೋಷಿಸಲಾಯಿತು.

IND vs BAN: ಬ್ಯಾಟ್​ನಿಂದ ವಿಕೆಟ್​ಗೆ ಬಡಿದು ಅಂಪೈರ್ ವಿರುದ್ಧ ಗರಂ ಆದ ಹರ್ಮನ್! ವಿಡಿಯೋ ನೋಡಿ

ಕೋಪದಲ್ಲಿ ಹರ್ಮನ್‌ಪ್ರೀತ್ ಮಾಡಿದ್ದೇನು?

ಪಂದ್ಯದ ವೇಳೆ ಹರ್ಮನ್‌ಪ್ರೀತ್ ಕೌರ್ ವಿರುದ್ಧ ಬಾಂಗ್ಲಾ ತಂಡ ಕ್ಯಾಚ್ ಔಟ್​ಗೆ ಮನವಿ ಮಾಡಿತು. ಬಾಂಗ್ಲಾ ತಂಡದ ಮನವಿ ಪುರಸ್ಕರಿಸಿದ ಅಂಪೈರ್, ಔಟೆಂದು ನಿರ್ಣಯ ನೀಡಿದರು. ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನಿಂದ ಕೋಪಗೊಂಡ ಕೌರ್, ಬ್ಯಾಟ್‌ನಿಂದ ವಿಕೆಟ್‌ಗೆ ಹೊಡೆದರು. ಇದಾದ ಬಳಿಕ ಅಂಪೈರ್ ತನ್ವೀರ್ ಅಹ್ಮದ್ ಜತೆ ವಾಗ್ವಾದಕ್ಕಿಳಿದರು. ಅಷ್ಟೇ ಅಲ್ಲದೆ ಪಂದ್ಯದ ನಂತರವೂ ಅಂಪೈರ್ ಮತ್ತು ಅವರ ನಿರ್ಧಾರಗಳ ಮೇಲೆ ಪ್ರಶ್ನೆಗಳನ್ನು ಎತ್ತಿದರು.

ಯಾವುದಕ್ಕೆ ಎಷ್ಟು ದಂಡ?

ಸಿಕ್ಕಿರುವ ಮಾಹಿತಿಯ ಪ್ರಕಾರ, ಹರ್ಮನ್‌ಪ್ರೀತ್‌ ಬ್ಯಾಟ್‌ನಿಂದ ವಿಕೆಟ್‌ಗೆ ಹೊಡೆದಿದ್ದಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ಕಡಿತಗೊಳಿಸಲಾಗಿದೆ. ಹಾಗೆಯೇ ಪಂದ್ಯ ಮುಗಿದ ಬಳಿಕ ತೋರಿದ ವರ್ತನೆಗೆ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ