IND vs ENG: ಮೂವರ ಅರ್ಧಶತಕ; 358 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ

Manchester Test: ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಕೊನೆಗೊಂಡಿತು. ತಂಡದ ಪರ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಮತ್ತು ರಿಷಭ್ ಪಂತ್ ಅರ್ಧಶತಕ ಗಳಿಸಿದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 5 ವಿಕೆಟ್ ಪಡೆದರು. ಜೋಫ್ರಾ ಆರ್ಚರ್ ಜಸ್ಪ್ರೀತ್ ಬುಮ್ರಾ ಅವರನ್ನು ಔಟ್ ಮಾಡುವ ಮೂಲಕ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.

IND vs ENG: ಮೂವರ ಅರ್ಧಶತಕ; 358 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ
Ind Vs Eng

Updated on: Jul 24, 2025 | 7:31 PM

ಮ್ಯಾಂಚೆಸ್ಟರ್ ಟೆಸ್ಟ್​ನಲ್ಲಿ (Manchester Test) ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಕೊನೆಗೊಂಡಿದೆ. ವೇಗಿ ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ ಅವರನ್ನು ಔಟ್ ಮಾಡುವ ಮೂಲಕ ಟೀಂ ಇಂಡಿಯಾದ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ (Rishabh Pant) ಅರ್ಧಶತಕ ಸಿಡಿಸಿ ತಂಡವನ್ನು ಈ ಸ್ಕೋರ್​ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಇತ್ತ ಇಂಗ್ಲೆಂಡ್‌ ಪರ ಬೌಲಿಂಗ್‌ನಲ್ಲಿ ಮಿಂಚಿದ ನಾಯಕ ಬೆನ್ ಸ್ಟೋಕ್ಸ್ 5 ವಿಕೆಟ್ ಪಡೆದರು.

ಭಾರತಕ್ಕೆ ಉತ್ತಮ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರ ಆರಂಭಿಕ ಜೋಡಿ ಉತ್ತಮ ಆರಂಭವನ್ನು ನೀಡಿತು. ಆದರೆ ಎರಡನೇ ಸೆಷನ್‌ನಲ್ಲಿ ಕ್ರಿಸ್ ವೋಕ್ಸ್, ಕೆಎಲ್ ರಾಹುಲ್‌ ವಿಕೆಟ್ ಉರುಳಿಸಿ ಈ ಜೊತೆಯಾಟ ಮುರಿದರು. ರಾಹುಲ್ 98 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 46 ರನ್ ಗಳಿಸಿ ಔಟಾದರು. ಇದರ ನಂತರ, ಎಂಟು ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಲಿಯಾಮ್ ಡಾಸನ್, ಯಶಸ್ವಿ ಜೈಸ್ವಾಲ್‌ಗೆ ಪೆವಿಲಿಯನ್‌ ದಾರಿ ತೋರಿಸಿದರು. ಜೈಸ್ವಾಲ್ 107 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು.

ಸುದರ್ಶನ್ ಅರ್ಧಶತಕ

ಎರಡನೇ ಸೆಷನ್‌ನಲ್ಲಿ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಎಲ್ ಮತ್ತು ಯಶಸ್ವಿ ಹೊರತುಪಡಿಸಿ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ಶುಭ್​ಮನ್ ಗಿಲ್ ಕೂಡ ಔಟಾದರು. ಬೆನ್ ಸ್ಟೋಕ್ಸ್ ಅವರನ್ನು ಎಲ್‌ಬಿಡಬ್ಲ್ಯೂ ಆಗಿ ಔಟ್ ಮಾಡಿದರು. ಗಿಲ್​ಗೆ ಕೇವಲ 12 ರನ್ ಗಳಿಸಲು ಸಾಧ್ಯವಾಯಿತು. ಮೂರನೇ ಸೆಷನ್‌ನಲ್ಲಿ, ರಿಷಭ್ ಪಂತ್ ಮತ್ತು ಸಾಯಿ ಸುದರ್ಶನ್ ಜವಾಬ್ದಾರಿ ವಹಿಸಿಕೊಂಡು 72 ರನ್​ಗಳ ಜೊತೆಯಾಟವನ್ನಾಡಿದರು.

IND vs ENG: ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ಪಂತ್​ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ

ರಿಷಭ್ ಪಂತ್ ಸ್ಮರಣೀಯ ಆಟ

ಆದರೆ ರಿಷಭ್ ಪಂತ್ ಗಾಯಗೊಂಡು ಅರ್ಧಕ್ಕೆ ಆಟ ನಿಲ್ಲಿಸಿ ಮೈದಾನ ತೊರೆದಿದ್ದರು. ಹೀಗಾಗಿ ಮೊದಲ ದಿನದಾಟದಂತ್ಯದ ವೇಳೆಗೆ ರವೀಂದ್ರ ಜಡೇಜಾ 37 ಎಸೆತಗಳಲ್ಲಿ 19 ರನ್ ಮತ್ತು ಶಾರ್ದೂಲ್ ಠಾಕೂರ್ 36 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ ಪಂದ್ಯದ ಎರಡನೇ ದಿನದಂದು ಭಾರತ ತಂಡವು ರವೀಂದ್ರ ಜಡೇಜಾ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಜಡೇಜಾ 40 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ಇತ್ತ ಶಾರ್ದೂಲ್ ಠಾಕೂರ್ 88 ಎಸೆತಗಳಲ್ಲಿ 41 ರನ್ ಗಳಿಸಿ ಬೆನ್ ಸ್ಟೋಕ್ಸ್‌ಗೆ ಬಲಿಯಾದರು. ವಾಷಿಂಗ್ಟನ್ ಸುಂದರ್ 90 ಎಸೆತಗಳಲ್ಲಿ 27 ರನ್ ಗಳಿಸಿದರೆ, ಅನ್ಶುಲ್ ಕಾಂಬೋಜ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಗಾಯದ ನಡುವೆಯೂ ಬ್ಯಾಟಿಂಗ್​ಗೆ ಬಂದಿದ್ದ ರಿಷಭ್ ಪಂತ್ 54 ರನ್ ಗಳಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Thu, 24 July 25