IND vs WI: ಕೆರಿಬಿಯನ್ ದೈತ್ಯರನ್ನು ಕ್ಲೀನ್ ಸ್ವೀಪ್ ಮಾಡಿ ಏಕದಿನ ಸರಣಿ ಗೆದ್ದ ಭಾರತ!

| Updated By: ಪೃಥ್ವಿಶಂಕರ

Updated on: Feb 11, 2022 | 8:58 PM

IND vs WI: ಸತತ ಮೂರನೇ ಗೆಲುವಿನೊಂದಿಗೆ ಭಾರತ ತಂಡ ವಿಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 96 ರನ್‌ಗಳ ಜಯ ಸಾಧಿಸಿದೆ.

IND vs WI: ಕೆರಿಬಿಯನ್ ದೈತ್ಯರನ್ನು ಕ್ಲೀನ್ ಸ್ವೀಪ್ ಮಾಡಿ ಏಕದಿನ ಸರಣಿ ಗೆದ್ದ ಭಾರತ!
ಟೀಂ ಇಂಡಿಯಾ
Follow us on

ಭಾರತ ತಂಡವು ಮೂರನೇ ODI (India vs West Indies, 3rd ODI) ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತು. ಸತತ ಮೂರನೇ ಗೆಲುವಿನೊಂದಿಗೆ ಭಾರತ ತಂಡ ವಿಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 96 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 265 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ವಿಂಡೀಸ್ ತಂಡ 169 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಗೆಲುವಿನಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರಿಷಬ್ ಪಂತ್ ಅದ್ಭುತ ಅರ್ಧಶತಕಗಳನ್ನು ಗಳಿಸಿದರು. ಬೌಲಿಂಗ್ ನಲ್ಲಿ ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಪ್ರಶಾಂತ್ ಕೃಷ್ಣ ಮತ್ತು ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ನೀಡಿದರು. ಸಿರಾಜ್ ಮತ್ತು ಕೃಷ್ಣ ತಲಾ 3 ವಿಕೆಟ್ ಪಡೆದರು. ಕುಲದೀಪ್, ದೀಪಕ್ ಚಹಾರ್ ತಲಾ 2 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ 34 ಮತ್ತು ಓಡಿನ್ ಸ್ಮಿತ್ 36 ರನ್ ಗಳಿಸಿದರು. ಟೀಂ ಇಂಡಿಯಾದ ಬೌಲಿಂಗ್ ಮುಂದೆ ಬೇರೆ ಯಾವ ಬ್ಯಾಟ್ಸ್ ಮನ್​ಗೂ ನಿಲ್ಲಲಾಗಲಿಲ್ಲ.

ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ನಲ್ಲಿ ಭಾರತಕ್ಕೆ ಅತ್ಯಧಿಕ 80 ರನ್‌ಗಳ ಕೊಡುಗೆ ನೀಡಿದರು. ರಿಷಬ್ ಪಂತ್ ಕೂಡ 56 ರನ್‌ಗಳ ಇನಿಂಗ್ಸ್‌ ಆಡಿದರು. ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ 110 ರನ್‌ಗಳ ಜೊತೆಯಾಟವಿತ್ತು. ಇದರ ನಂತರ, ಕೆಳ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಚಹಾರ್ 38 ಮತ್ತು ವಾಷಿಂಗ್ಟನ್ ಸುಂದರ್ 33 ರನ್ ಕೊಡುಗೆ ನೀಡಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು 8ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು.

ಭಾರತದ ಅಗ್ರ ಕ್ರಮಾಂಕ ವಿಫಲ

ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಉತ್ಸಾಹಭರಿತ ಪಿಚ್‌ನ ಲಾಭವನ್ನು ವಿಂಡೀಸ್ ಬೌಲರ್‌ಗಳು ಪಡೆದರು. ಅಲ್ಜಾರಿ ಜೋಸೆಫ್ ಒಂದೇ ಓವರ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಸಂಚಲನ ಮೂಡಿಸಿದರು. ವಿರಾಟ್ ಕೊಹ್ಲಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದಾದ ಬಳಿಕ ಶಿಖರ್ ಧವನ್ ಅವರನ್ನು ಓಡಿನ್ ಸ್ಮಿತ್ ಔಟ್ ಮಾಡಿದ್ದರಿಂದ ಭಾರತ ಕೇವಲ 42 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ತಂಡವನ್ನು ತಮ್ಮದಾಗಿಸಿಕೊಂಡರು. ಪಂತ್ ತಮ್ಮದೇ ಶೈಲಿಯಲ್ಲಿ ಆಡಿದರು. ಅಯ್ಯರ್ ವಿಕೆಟ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಮ್ಮ ಅರ್ಧಶತಕಗಳನ್ನು ಪೂರ್ಣಗೊಳಿಸಿದರು ಮತ್ತು ಅಯ್ಯರ್-ಪಂತ್ ನಡುವೆ ಶತಕದ ಜೊತೆಯಾಟವೂ ಇತ್ತು.

ಪಂತ್ ಮತ್ತು ಅಯ್ಯರ್ ಇಬ್ಬರೂ ವಾಲ್ಷ್ ಅವರ ಸ್ಪಿನ್‌ನಲ್ಲಿ ಔಟಾದರು. ನಂತರ ಟೀಂ ಇಂಡಿಯಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು. ಪಂತ್, ಆಫ್-ಸ್ಟಂಪ್‌ನ ಸಮೀಪದಿಂದ ತಡವಾಗಿ ಕಟ್ ಆಡಲು ಪ್ರಯತ್ನಿಸುತ್ತಾ, ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿದರು. ಆದರೆ ಅಯ್ಯರ್ ಹೆಚ್ಚುವರಿ ಕವರ್‌ನಲ್ಲಿ ಲಾಂಗ್ ಶಾಟ್ ಆಡಲು ಪ್ರಯತ್ನಿಸಿ ಔಟಾದರು. ಇದೇ ವೇಳೆ ಫ್ಯಾಬಿಯನ್ ಅಲೆನ್ 6 ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಟೀಂ ಇಂಡಿಯಾ 187 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಇದರ ನಂತರ ದೀಪಕ್ ಚಹಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಸಕಾರಾತ್ಮಕ ಕ್ರಿಕೆಟ್ ಆಟ ಭಾರತ ತಂಡದ ಸ್ಕೋರನ್ನು 260 ಕ್ಕೂ ಮೀರಿ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವೆಸ್ಟ್ ಇಂಡೀಸ್‌ನ ಅತ್ಯಂತ ಕಳಪೆ ಬ್ಯಾಟಿಂಗ್

ವಿಂಡೀಸ್​ನ ಅಗ್ರ ಕ್ರಮಾಂಕದ 5 ಬ್ಯಾಟ್ಸ್‌ಮನ್‌ಗಳ ಪೈಕಿ 4 ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲರಾದರು. ವಿಕೆಟ್ ಕೀಪರ್ ಶಾಯ್ ಹೋಪ್ 5 ರನ್ ಗಳಿಸಿ ಔಟಾದರು. ಬ್ರಾಂಡನ್ ಕಿಂಗ್ ಮತ್ತು ಶೆಮರಾ ಬ್ರೂಕ್ಸ್ ಅವರನ್ನು ದೀಪಕ್ ಚಹಾರ್ ಒಂದೇ ಓವರ್‌ನಲ್ಲಿ ಡೀಲ್ ಮಾಡಿದರು. ಇದಾದ ನಂತರ ಪ್ರಸಿದ್ಧ ಕೃಷ್ಣ ಡ್ಯಾರೆನ್ ಬ್ರಾವೋ ವಿಕೆಟ್ ಪಡೆದರು. ನಿಕೋಲಸ್ ಪೂರನ್ ಸ್ವಲ್ಪ ಸಮಯ ವಿಕೆಟ್‌ನಲ್ಲಿ ಉಳಿಯಲು ಪ್ರಯತ್ನಿಸಿದರು ಆದರೆ ಇನ್ನೊಂದು ತುದಿಯಿಂದ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಜೇಸನ್ ಹೋಲ್ಡರ್ ಅವರನ್ನು ಪ್ರಸಿದ್ಧ ಕೃಷ್ಣ ಅವರು ಬಲಿ ಪಡೆದರು. ಫ್ಯಾಬಿಯನ್ ಅಲೆನ್ ಅವರನ್ನು ಮೊದಲ ಎಸೆತದಲ್ಲಿ ಕುಲದೀಪ್ ಯಾದವ್ ಔಟ್ ಮಾಡಿದರು. 34 ರನ್ ಗಳಿಸಿದ್ದ ವಿಂಡೀಸ್ ನಾಯಕ ನಿಕೋಲಸ್ ಪೂರನ್ ಅವರನ್ನೂ ಕುಲದೀಪ್ ಔಟ್ ಮಾಡಿದರು.ವೆಸ್ಟ್ ಇಂಡೀಸ್ ಕೇವಲ 18.3 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ಇದರ ನಂತರ, ಓಡಿನ್ ಸ್ಮಿತ್ ಬ್ಯಾಟಿಂಗ್ ಮಾಡಿ 18 ಎಸೆತಗಳಲ್ಲಿ 36 ರನ್ ಗಳಿಸಿದರು. ಅಲ್ಜಾರಿ ಜೋಸೆಫ್ ಕೂಡ ಹೇಡನ್ ವಾಲ್ಷ್ ಜೊತೆ ವಿಕೆಟ್ ಮೇಲೆ ಸಮಯ ಕಳೆದರು. ಆದರೆ, ಈ ಆಟಗಾರರು ತಮ್ಮ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:Sourav Ganguly: ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ! ಐಪಿಎಲ್ ಮೆಗಾ ಹರಾಜಿಗೆ ದಾದಾ ಗೈರು?