
2025 ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ದುಬೈನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿ ಕಾಂಗರೂ ತಂಡಕ್ಕೆ ಪೂರ್ಣ 50 ಓವರ್‌ಗಳನ್ನು ಆಡಲು ಅವಕಾಶ ನೀಡಲಿಲ್ಲ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಆಸ್ಟ್ರೇಲಿಯಾ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿದ್ದು, ಈ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲೂ ಎದುರಾಳಿ ತಂಡವನ್ನು ಆಲೌಟ್ ಮಾಡಿದ ದಾಖಲೆ ಬರೆದಿದೆ. ಟೂರ್ನಿಯಲ್ಲಿ ಇದುವರೆಗೆ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಮಾತ್ರ ಆಡುತ್ತಿದೆ. ಈ ಮೈದಾನದಲ್ಲಿ ಇಲ್ಲಿಯವರೆಗೆ ಆಡಿರುವ 4 ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದು, ಎದುರಾಳಿ ತಂಡದ ಬ್ಯಾಟಿಂಗ್ ವಿಭಾಗವನ್ನು ದ್ವಂಸಗೊಳಿಸುವ ಕೆಲಸ ಮಾಡಿದ್ದಾರೆ. ಇದೀಗ ಸೆಮಿಫೈನಲ್‌ನಲ್ಲೂ ಅದೇ ಪ್ರದರ್ಶನ ನೀಡಿದ್ದು ಆಸ್ಟ್ರೇಲಿಯಾ ತಂಡವನ್ನು 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಮಾಡಿದ್ದಾರೆ.
ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಮೊಹಮ್ಮದ್ ಶಮಿ 10 ಓವರ್‌ಗಳಲ್ಲಿ 48 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಶಮಿ, ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ, ಜಹೀರ್ ಖಾನ್ 17 ವಿಕೆಟ್‌ಗಳೊಂದಿಗೆ 1 ನೇ ಸ್ಥಾನದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ 15 ವಿಕೆಟ್‌ಗಳೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ. ಶಮಿ ಹೊರತುಪಡಿಸಿ, ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಕೂಡ ತಲಾ 1 ವಿಕೆಟ್ ಪಡೆದರು.
ಭಾರತ ತಂಡವು ಈ ಹಿಂದೆ ದುಬೈ ಮೈದಾನದಲ್ಲಿ 3 ಗುಂಪು ಹಂತದ ಪಂದ್ಯಗಳನ್ನು ಆಡಿತ್ತು. ಈ ವೇಳೆ ತಂಡವು ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಎದುರಿಸಿತು. ಈ ಪಂದ್ಯಗಳಲ್ಲಿ, ಭಾರತೀಯ ಬೌಲರ್‌ಗಳು ಎದುರಾಳಿ ತಂಡದ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದರು. ಬಾಂಗ್ಲಾದೇಶ ವಿರುದ್ಧ ಶುಭಾರಂಭ ಮಾಡಿದ್ದ ಭಾರತ 228 ರನ್‌ಗಳಿಗೆ ಆಲೌಟ್ ಮಾಡಿತ್ತು.
ಈ ಪಂದ್ಯದಲ್ಲೂ ಶಮಿ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಇದಾದ ನಂತರ, ಫೆಬ್ರವರಿ 23 ರಂದು ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಭಾರತದ ಬೌಲರ್‌ಗಳು ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂತಿಮವಾಗಿ ಮಾರ್ಚ್ 2 ರಂದು ನಡೆದಿದ್ದ ನ್ಯೂಜಿಲೆಂಡ್ ವಿರುದ್ಧವೂ ಎಲ್ಲಾ 10 ವಿಕೆಟ್‌ಗಳನ್ನು ಉರುಳಿಸಿದ್ದರು. ಈಗ ಈ ಸಾಧನೆ ಸೆಮಿಫೈನಲ್‌ನಲ್ಲಿ ಸತತ ನಾಲ್ಕನೇ ಬಾರಿಗೆ ಪುನರಾವರ್ತನೆಯಾಗಿದೆ. ಈ ರೀತಿಯಾಗಿ ಭಾರತೀಯ ಬೌಲರ್‌ಗಳು 4 ಪಂದ್ಯಗಳಲ್ಲಿ ಎಲ್ಲಾ 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ