
ಜೂನ್ 28 ರಂದು ಅಂದರೆ ಭಾನುವಾರದಂದು ಕ್ರಿಕೆಟ್ ಪ್ರಿಯರಿಗೆ ಎರಡೆರಡು ಹೈವೋಲ್ಟೇಜ್ ಪಂದ್ಯಗಳನ್ನು ನೋಡುವ ಅವಕಾಶವಿದೆ. ಈ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಕಣಕ್ಕಿಳಿಯುತ್ತಿದ್ದು, ಈ ಎರಡೂ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯಗಳಾಗಿವೆ. ಒಂದೆಡೆ ಭಾರತದ ಪುರುಷರ ತಂಡ ಐರ್ಲೆಂಡ್ (India vs Ireland) ವಿರುದ್ಧ ಎರಡನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಆಡಿದರೆ, ಮತ್ತೊಂದೆಡೆ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು (India vs Australia) ಎದುರಿಸುತ್ತಿದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ 1-1 ರ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ. ಸೋತರೆ, ಸರಣಿ ಭಾರತದ ಕೈತಪ್ಪಲಿದೆ. ಇತ್ತ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ಗೇರಬೇಕೆಂದರೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಿದೆ. ಸೋತರೆ, ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಗಳಿವೆ. ಹೀಗಾಗಿ ಭಾರತದ ಎರಡೂ ತಂಡಗಳಿಗೆ ನಾಳೆಯ ಪಂದ್ಯ ನಿರ್ಣಾಯಕವಾಗಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸದಲ್ಲಿದೆ. ಈ ಮೊದಲು ನಡೆದಿದ್ದ ಎಲ್ಲಾ ಸರಣಿಗಳಲ್ಲೂ ಭಾರತ ಏಕಪಕ್ಷೀಯ ಗೆಲುವು ಸಾಧಿಸಿದ್ದರಿಂದ ಈ ಸರಣಿ ಕೂಡ ಭಾರತದ ಪಾಲಾಗಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಬಲಿಷ್ಠ ಟೀಂ ಇಂಡಿಯಾಕ್ಕೆ ಹೀನಾಯ ಸೋಲಿನ ಶಾಕ್ ನೀಡಿರುವ ಆತಿಥೇಯ ಐರ್ಲೆಂಡ್ ತಂಡ ಮೊದಲ ಟಿ20 ಪಂದ್ಯವನ್ನು 34 ರನ್ಗಳಿಂದ ಗೆದ್ದುಕೊಂಡಿದೆ.
ಈ ಮೂಲಕ 2 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇದೀಗ ನಾಳೆ ನಡೆಯಲಿರುವ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಸೋತರೆ, ಐರ್ಲೆಂಡ್ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಒಂದು ವೇಳೆ ಭಾರತ ಗೆದ್ದರೆ ಸರಣಿ 1-1 ರ ಸಮಬಲದೊಂದಿಗೆ ಅಂತ್ಯವಾಗಲಿದೆ. ಹೀಗಾಗಿ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿರುವ ಭಾರತ, ಸರಣಿ ಸೋಲಿನಿಂದ ಪಾರಾಗಲು ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಎದುರಾಳಿ ಯಾರು?
ಇನ್ನು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅದ್ಭುತ ಆರಂಭ ಪಡೆದುಕೊಂಡಿದ್ದ ಹರ್ಮನ್‌ಪ್ರೀತ್ ಪಡೆ, ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿತ್ತು. ಆ ಬಳಿಕ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಿತ್ತಾದರೂ, ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯವನ್ನು ಗೆದ್ದರಷ್ಟೇ ಅದಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಒಂದು ವೇಳೆ ಸೋತರೆ ಅದರ ಸೆಮಿಫೈನಲ್ ಕನಸಿಗೆ ಬ್ರೇಕ್ ಬೀಳಲಿದೆ. ಹೀಗಾಗಿ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಅಜೇಯರಾಗಿ ಉಳಿದಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಶತಾಯಗತಾಯ ಸೋಲಿಸಲೇಬೇಕಾದ ಒತ್ತಡದಲ್ಲಿದೆ.