ಟೀಂ ಇಂಡಿಯಾವನ್ನು ಟೆಸ್ಟ್ ಜರ್ಸಿಯಲ್ಲಿ ನೋಡಲು ಇನ್ನೂ 6 ತಿಂಗಳು ಕಾಯಬೇಕು

|

Updated on: Jan 05, 2025 | 6:33 PM

Team India's Road to WTC 2025-27: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತಿರುವ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದಿದೆ. ಇದೀಗ ಟೀಂ ಇಂಡಿಯಾ 2025-27ರ ಡಬ್ಲ್ಯಟಿಸಿ ಅಭಿಯಾನವನ್ನು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ ತಿಂಗಳಲ್ಲಿ ಆರಂಭವಾಗಲಿದೆ.

ಟೀಂ ಇಂಡಿಯಾವನ್ನು ಟೆಸ್ಟ್ ಜರ್ಸಿಯಲ್ಲಿ ನೋಡಲು ಇನ್ನೂ 6 ತಿಂಗಳು ಕಾಯಬೇಕು
ಟೀಂ ಇಂಡಿಯಾ
Follow us on

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದು ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಬೇಕೆಂಬ ಇರಾದೆಯೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಖಾಲಿ ಕೈಯಲ್ಲಿ ತವರಿಗೆ ವಾಪಸ್ಸಾಗುತ್ತಿದೆ. ಉಭಯ ತಂಡಗಳ ನಡುವೆ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡ ಆಸ್ಟ್ರೇಲಿಯಾ ತಂಡ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪೈನಲ್​ಗೇರಿದರೆ, ಇತ್ತ ಟೀಂ ಇಂಡಿಯಾ ಸರಣಿ ಸೋತಿದಲ್ಲದೆ, ಡಬ್ಲ್ಯುಟಿಸಿ ಫೈನಲ್​ ರೇಸ್​ನಿಂದಲೂ ಹೊರಬಿದ್ದಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ನಾಲ್ಕನೇ ಆವೃತ್ತಿಯಲ್ಲಾದರೂ ಮತ್ತೆ ಫೈನಲ್​ಗೇರುವ ಗುರಿ ಇಟ್ಟುಕೊಂಡಿರುವ ಟೀಂ ಇಂಡಿಯಾ ಅದಕ್ಕಾಗಿ ಇನ್ನು ಆರು ತಿಂಗಳು ಕಾಯಬೇಕಿದೆ.

ವಾಸ್ತವವಾಗಿ ಡಬ್ಲ್ಯುಟಿಸಿ ಮೂರನೇ ಆವೃತ್ತಿಯ ಫೈನಲ್ ಪಂದ್ಯ ಜೂನ್ 11 ರಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಆ ಬಳಿಕವಷ್ಟೇ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ಗೆ ಚಾಲ್ತಿ ಸಿಗಲಿದೆ. ಇದರ ಭಾಗವಾಗಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-2027 ಅಭಿಯಾನವನ್ನು ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗಾಗಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ

  1. ಮೊದಲ ಪಂದ್ಯ: ಜೂನ್ 20 ರಿಂದ ಜೂನ್ 24, ಹೆಡಿಂಗ್ಲಿ ಲೀಡ್ಸ್
  2. ಎರಡನೇ ಪಂದ್ಯ: ಜುಲೈ 2 ರಿಂದ ಜುಲೈ 6, ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
  3. ಮೂರನೇ ಪಂದ್ಯ: ಜುಲೈ 10 ರಿಂದ ಜುಲೈ 14, ಲಾರ್ಡ್ಸ್, ಲಂಡನ್
  4. ನಾಲ್ಕನೇ ಪಂದ್ಯ: ಜುಲೈ 23 ರಿಂದ 27 ಜುಲೈ, ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
  5. ಐದನೇ ಪಂದ್ಯ: ಜುಲೈ 31 ರಿಂದ ಆಗಸ್ಟ್ 4, ಕೆನ್ನಿಂಗ್ಟನ್ ಓವಲ್, ಲಂಡನ್

ಭಾರತಕ್ಕೆ ಇಂಗ್ಲೆಂಡ್ ಪ್ರವಾಸ

ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ಮೊದಲು ಭಾರತಕ್ಕೆ ಬರಲಿದೆ. ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿ ನಡೆಯಲ್ಲಿದೆ. ಈಗಾಗಲೇ ಈ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು ಜೋಸ್ ಬಟ್ಲರ್ ಮತ್ತೆ ವಹಿಸಿಕೊಂಡಿದ್ದಾರೆ. ಇವರಲ್ಲದೆ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಕೂಡ ನಿಯಮಿತ ಓವರ್​ಗಳ ಮಾದರಿಗೆ ಮತ್ತೊಮ್ಮೆ ಮರಳಿದ್ದಾರೆ. ಆದರೆ ತಂಡದ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್​ ಈ ಎರಡೂ ಸರಣಿಗಳಿಂದಲೂ ಹೊರಗುಳಿದಿದ್ದಾರೆ. ಇನ್ನ ಟೀಂ ಇಂಡಿಯಾದ ವಿಚಾರಕ್ಕೆ ಬರುವುದಾದರೆ,, ಇಷ್ಟರಲ್ಲೇ ಈ ಸರಣಿಗೆ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ