IND vs ENG: ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ; ಬುಮ್ರಾ ಎಂಟ್ರಿ, ಕನ್ನಡಿಗನಿಗೆ ಕೋಕ್

India vs England 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಮೊದಲ ಎರಡು ಪಂದ್ಯಗಳಲ್ಲಿ ಒಂದೊಂದು ತಂಡ ಗೆದ್ದಿದೆ. ಲಾರ್ಡ್ಸ್‌ನಲ್ಲಿ ಭಾರತದ ದಾಖಲೆ ಉತ್ತಮವಾಗಿಲ್ಲವಾದರೂ, ಈ ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಜೋಫ್ರಾ ಆರ್ಚರ್ 4 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. ಹಾಗೆಯೇ ಭಾರತ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು ಪ್ರಸಿದ್ಧ್ ಕೃಷ್ಣ ಬದಲಿಗೆ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

IND vs ENG: ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ; ಬುಮ್ರಾ ಎಂಟ್ರಿ, ಕನ್ನಡಿಗನಿಗೆ ಕೋಕ್
Ind Vs Eng

Updated on: Jul 10, 2025 | 3:22 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್‌ನಲ್ಲಿ (Lords Test) ನಡೆಯುತ್ತಿದೆ. ಇದಕ್ಕೂ ಮೊದಲು ನಡೆದ ಎರಡು ಟೆಸ್ಟ್‌ಗಳ ಫಲಿತಾಂಶಗಳ ಪ್ರಕಾರ, ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಜಯಗಳಿಸಿದರೆ, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಜಯಗಳಿಸಿದೆ. ಹೀಗಾಗಿ ಎರಡೂ ತಂಡಗಳಿಗೆ ಸರಣಿಯಲ್ಲಿ ಮೇಲುಗೈ ಸಾಧಿಸಲು ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿದೆ. ಇನ್ನು ಲಾರ್ಡ್ಸ್ ಬಗ್ಗೆ ಹೇಳುವುದಾದರೆ, ಇಲ್ಲಿಯೂ ಭಾರತದ ದಾಖಲೆ ಉತ್ತಮವಾಗಿಲ್ಲ. ಆದರೆ, ಟೀಮ್ ಇಂಡಿಯಾ ಆಡುವ ಮತ್ತು ಪ್ರದರ್ಶನ ನೀಡುತ್ತಿರುವ ರೀತಿಯನ್ನು ನೋಡಿದರೆ, ಈ ಪಂದ್ಯದಲ್ಲೂ ಭಾರತ ಗೆಲ್ಲುವ ನಿರೀಕ್ಷೆ ಇದೆ. ಇನ್ನು ಲಾರ್ಡ್ಸ್‌ನಲ್ಲಿ ಆರಂಭವಾಗಿರುವ ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಸತತ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ.

ಎಂದಿನಂತೆ ಲಾರ್ಡ್ಸ್ ಟೆಸ್ಟ್‌ ಪಂದ್ಯಕ್ಕಾಗಿ ಆತಿಥೇಯ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ನಿರೀಕ್ಷೆಯಂತೆ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, 4 ವರ್ಷಗಳ ನಂತರ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಿದ್ದಾರೆ. ಇದರೊಂದಿಗೆ, ಆರ್ಚರ್ ಸುಮಾರು 4 ವರ್ಷ ಮತ್ತು 5 ತಿಂಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಪ್ರಾಸಂಗಿಕವಾಗಿ, ಆರ್ಚರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಇದೇ ಟೀಂ ಇಂಡಿಯಾ ವಿರುದ್ಧ 2021 ರ ಫೆಬ್ರವರಿಯಲ್ಲಿ ಅಹಮದಾಬಾದ್​ನಲ್ಲಿ ಆಡಿದ್ದರು.

ಟಾಸ್ ವಿವರ ಇಲ್ಲಿದೆ

ಟೀಂ ಇಂಡಿಯಾದಲ್ಲಿ 1 ಬದಲಾವಣೆ

ಟಾಸ್ ಸೋತ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಕೂಡ ನಾನು ಟಾಸ್ ಗೆದ್ದಿದ್ದರೆ, ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದರು. ಆದ್ದರಿಂದ ಟೀಂ ಇಂಡಿಯಾ ಟಾಸ್ ಸೋತರೂ ಅದಕ್ಕೆ ಬೇಕಾದ ಆಯ್ಕೆಯೇ ಸಿಕ್ಕಿದೆ. ಇನ್ನು ತಂಡದ ಪ್ಲೇಯಿಂಗ್ 11 ಬಗ್ಗೆ ಹೇಳುವುದಾದರೆ, ಮೊದಲೆರಡು ಪಂದ್ಯಗಳಲ್ಲಿ ಸಾಕಷ್ಟು ರನ್ ನೀಡಿ ದುಬಾರಿಯಾಗಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ತಂಡದಿಂದ ಹೊರಗಿಟ್ಟಿದ್ದು, ಅವರ ಬದಲಿಗೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

IND vs ENG: ಲಾರ್ಡ್ಸ್‌ ಟೆಸ್ಟ್​ಗೆ ಹೇಗಿರಲಿದೆ ಭಾರತದ ಪ್ಲೇಯಿಂಗ್ 11? ರಿಷಭ್ ಪಂತ್ ಹೇಳಿದ್ದೇನು?

ಉಭಯ ತಂಡಗಳು

ಭಾರತದ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್.

ಇಂಗ್ಲೆಂಡ್ ಪ್ಲೇಯಿಂಗ್ XI: ಜ್ಯಾಕ್ ಕ್ರೌಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಶೋಯೆಬ್ ಬಶೀರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Thu, 10 July 25