ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
England vs India Test: ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ದಾಖಲಿಸಿತ್ತು. ಇನ್ನು ಎಡ್ಜ್ಬಾಸ್ಟನ್ನಲ್ಲಿ ಜರುಗಿದ ದ್ವಿತೀಯ ಪಂದ್ಯದಲ್ಲಿ ಆಂಗ್ಲರನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 10) ಶುರುವಾಗಲಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ವೇಗಿ ದೀಪಕ್ ಚಹರ್ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಅದು ಕೂಡ ನೆಟ್ ಬೌಲರ್ ಆಗಿ. ಬುಧವಾರ ನಡೆದ ಟೀಮ್ ಇಂಡಿಯಾದ ಬ್ಯಾಟಿಂಗ್ ಅಭ್ಯಾಸದ ವೇಳೆ ದೀಪಕ್ ಚಹರ್ ಬೌಲಿಂಗ್ ಮಾಡುತ್ತಿರುವುದು ಕಂಡು ಬಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ವಿಂಬಲ್ಡನ್ ಟೆನಿಸ್ ಪಂದ್ಯವನ್ನು ವೀಕ್ಷಿಸಲು ಲಂಡನ್ಗೆ ತೆರಳಿದ್ದ ದೀಪಕ್ ಚಹರ್ ಇದೀಗ ಭಾರತ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದು, ಈ ಮೂಲಕ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ಬ್ಯಾಟರ್ಗಳು ಸಜ್ಜಾಗಲು ನೆರವಾಗಿದ್ದಾರೆ. ಇದೀಗ ದೀಪಕ್ ಚಹರ್ ನೆಟ್ಸ್ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.