IND vs WI: ಇಂದು ಭಾರತ-ವೆಸ್ಟ್ ಇಂಡೀಸ್ ಎರಡನೇ ಏಕದಿನ: ಗೆದ್ದು ಸರಣಿ ವಶಪಡಿಸಿಕೊಳ್ಳುತ್ತಾ ರೋಹಿತ್ ಪಡೆ?
India vs West Indies, 2nd ODI: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜುರುಗಿದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಕದನಕ್ಕೆ ರೋಹಿತ್ ಪಡೆ ಸಜ್ಜಾಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಇಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜುರುಗಿದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 6 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಆಲ್ರೌಂಡ್ ಪ್ರದರ್ಶನ ನೀಡಿತ್ತು. ಇದೀಗ ಎರಡನೇ ಕದನಕ್ಕೆ ಸಜ್ಜಾಗಿದೆ. ಪರಿಪೂರ್ಣ ನಾಯಕನಾಗಿ ತಂಡವನ್ನು ಚೊಚ್ಚಲ ಬಾರಿಗೆ ಏಕದಿನದಲ್ಲಿ ಮುನ್ನಡೆಸಿದ ರೋಹಿತ್ ಶರ್ಮಾ (Rohit Sharma) ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯುಜ್ವೇಂದ್ರ ಚಹಲ್ ಮತ್ತು ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಸಂಚಲಸ ಸೃಷ್ಟಿಸಿದರು. ಪದಾರ್ಪಣೆ ಪಂದ್ಯವನ್ನು ಆಡಿದ ದೀಪಕ್ ಹೂಡ ಭರವಸೆ ಮೂಡಿಸಿದರು. ಹೀಗಾಗಿ ಎರಡನೇ ಏಕದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಇದರ ಜೊತೆಗೆ ಆಡುವ ಬಳಗದ ವಿಚಾರದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತಲೆಕೆಡಿಸಿಕೊಂಡಿದೆ. ಯಾಕಂದ್ರೆ ವೈಯಕ್ತಿಕ ಕಾರಣಗಳಿಂದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಸೋಮವಾರ ತಂಡವನ್ನು ಸೇರಿಕೊಂಡಿದ್ದಾರೆ. ಇವರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೆ ಯಾರನ್ನು ಕೈಬಿಡುವುದು ಎಂಬ ಗೊಂದಲ ಉಂಟಾಗಿದೆ. ಅಲ್ಲದೆ ಮಾಯಾಂಕ್ ಅಗರ್ವಾಲ್ ಅವರ ಕ್ವಾರಂಟೈನ್ ಅವಧಿ ಕೂಡ ಮುಗಿದಿದೆ. ಹಾಗೆಯೇ ನವದೀಪ್ ಸೈನಿ ಕೋವಿಡ್ ಪಾಸಿಟಿವ್‌ನಿಂದ ಚೇತರಿಸಿಕೊಂಡಿದ್ದಾರೆ. ಇವರಿಬ್ಬರೂ ತಂಡ ಸೇರಿಕೊಂಡಿದ್ದಾರೆ. ರಾಹುಲ್ ಆಡುವ ಬಳಗಕ್ಕೆ ಸೇರ್ಪಡೆಯಾದರೆ ಇಶಾನ್ ಕಿಶನ್ ಹೊರಗುಳಿಯುವುದು ಬಹುತೇಕ ಖಚಿತ.
ಇತ್ತ ಕುಲ್ದೀಪ್ ಯಾದವ್ ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಹಿರಿಯ ಅನುಭವಿ ಆಗಿರುವುದರಿಂದ ಇವರಿಗೆ ಚಾನ್ಸ್ ನೀಡ್ತಾರ ಎಂಬುದು ನೋಡಬೇಕಿದೆ. ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ಗಳು ಮಿಂಚಿರುವುದರಿಂದ ಓರ್ವ ವೇಗಿಯನ್ನು ಕೈಬಿಟ್ಟು ಕುಲ್ದೀಪ್ ಯಾದವ್ಗೆ ಅವಕಾಶ ನೀಡಿದರೆ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಮೊದಲ ಏಕದಿನ ಪಂದ್ಯ ನಡೆದ ಕ್ರೀಡಾಂಗಣದಲ್ಲೇ ಎರಡನೇ ಏಕದಿನ ಪಂದ್ಯ ಕೂಡ ನಡೆಯಲಿದೆ. ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಕೋವಿಡ್ ವರದಿ ನೆಗೆಟಿವ್ ಬಂದು ಮಂಗಳವಾರ ಸಂಜೆ ತಂಡ ಸೇರಿಕೊಂಡಿದ್ದಾರೆ. ಇವರಿಗೆ ಆಡುವ ಬಳಗದಲ್ಲಿ ಸ್ಥಾನ ಇದೆಯೇ ಎಂಬ ಕುತೂಹಲ ಕೂಡ ಮೂಡಿದೆ.
ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ ಬದಲಾವಣೆ ಖಚಿತ. ಕಳೆದ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಬಿಟ್ಟರೆ ಉಳಿದ ಯಾವ ಬ್ಯಾಟರ್ಗಳೂ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಸ್ಟಾರ್ ಬ್ಯಾಟರ್ಗಳಾದ ನಾಯಕ ಕೀರೊನ್ ಪೊಲಾರ್ಡ್, ಶಾಯ್ ಹೋಪ್, ಡ್ಯಾರೆನ್ ಬ್ರಾವೋ ಮತ್ತು ನಿಕೋಲಸ್ ಪೂರನ್ ವಿಫಲರಾಗಿರುವುದು ಕೋಚ್ಗೆ ತಲೆನೋವಾಗಿದೆ. ಬೌಲಿಂಗ್ನಲ್ಲೂ ಅಲ್ಜರಿ ಜೋಸೆಫ್ ಬಿಟ್ಟರೆ ಮತ್ಯಾರು ಮಾರಕವಾಗಿ ಪರಿಣಮಿಸಿಲ್ಲ. ಹೀಗಾಗಿ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 1:30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್. ಆನ್ಲೈನ್ನಲ್ಲಾದರೆ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.
ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್(ವಿ.ಕೀ), ದೀಪಕ್ ಚಹರ್, ಶಾರ್ದುಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಆವೇಶ್ ಖಾನ್, ಇಶಾನ್ ಕಿಶನ್, ಶಾರುಖ್ ಖಾನ್, ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ಶಿಖರ್ ಧವನ್.
ವೆಸ್ಟ್ ಇಂಡೀಸ್ ತಂಡ: ಕೀರೊನ್ ಪೊಲಾರ್ಡ್ (ನಾಯಕ), ಕೀಮರ್ ರೋಚ್, ಎನ್ಕ್ರುಮ್ ಬೊನ್ನೆರ್, ಬ್ರಾಂಡನ್ ಕಿಂಗ್, ಫಾಬಿನ್ ಅಲೆನ್, ಡ್ಯಾರೆನ್ ಬ್ರಾವೋ, ಶಮರ್ ಬ್ರೋಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೆಲ್ ಹುಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೊ ಶೆಪರ್ಡ್, ಓಡೆನ್ ಸ್ಮಿತ್, ಹೇಡನ್ ವಾಲ್ಶ್.
Rohit Sharma: ರೋಹಿತ್ ಶರ್ಮಾ ಒಬ್ಬ ಅಂಜುಬುರುಕ: ಹಿಟ್ಮ್ಯಾನ್ ವಿರುದ್ಧ ಕೆಂಡ ಕಾರುತ್ತಿರುವ ಫ್ಯಾನ್ಸ್
Virat Kohli: ಹಲವು ತಂಡಗಳಿಂದ ನನಗೆ ಆಫರ್ ಇತ್ತು, ಆದರೂ ನಾನು ಆರ್ಸಿಬಿಯಲ್ಲೇ ಉಳಿದುಕೊಂಡೆ..!