ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ (Road Safety World Series) ಎರಡನೇ ಆವೃತ್ತಿಗೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯದಲ್ಲೇ ಇಂಡಿಯಾ ಲೆಜೆಂಡ್ಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ (India Legends vs South Africa Legends) ಸ್ಫೋಟಕ ಆಟವಾಡಿತು. ಸ್ಟುವರ್ಟ್ ಬಿನ್ನಿ (Stuart Binny) ಹಾಗೂ ಯೂಸುಫ್ ಪಠಾಣ್ ಮನಬಂದಂತೆ ಬ್ಯಾಟ್ ಬೀಸಿದರೆ, ಬೌಲಿಂಗ್ನಲ್ಲಿ ರಾಹುಲ್ ಶರ್ಮಾ ಮಿಂಚಿದರು. ಪರಿಣಾಮ ಭಾರತ ಲೆಜೆಂಡ್ಸ್ ತಂಡ 61 ರನ್‌ಗಳ ದೊಡ್ಡ ಅಂತರದಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಸಾಧಾರಣ ಆರಂಭ ಪಡೆದುಕೊಂಡಿತು. ನಾಯಕ ಸಚಿನ್ ತೆಂಡೂಲ್ಕರ್ 15 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ನಮನ್ ಓಜಾ 18 ಎಸೆತಗಳಲ್ಲಿ 21 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಜೊತೆಯಾದ ಸುರೇಶ್ ರೈನಾ ಹಾಗೂ ಸ್ಟುವರ್ಟ್ ಬಿನ್ನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಬಿನ್ನಿ ಫೋರ್–ಸಿಕ್ಸರ್ಗಳ ಮಳೆ ಸುರಿಸಿದರೆ ರೈನಾ ಇವರಿಗೆ ಉತ್ತಮ ಸಾಥ್ ನೀಡಿದರು.
ರೈನಾ 22 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್ನೊಂದಿಗೆ 33 ರನ್ ಗಳಿಸಿ ಔಟಾದರೆ, ಯುವರಾಜ್ ಸಿಂಗ್ 6 ರನ್ಗೆ ನಿರ್ಗಮಿಸಿದರು. ಕೊನೆಯ ಹಂತದಲ್ಲಿ ಬಿನ್ನಿ ಹಾಗೂ ಯೂಸುಫ್ ಪಠಾಣ್ ಎದುರಾಳಿ ಬೌಲರ್ಗಳ ಬೆರಿಳಿಸಿದರು. ಪಠಾಣ್ ಕೇವಲ 15 ಎಸೆತಗಳಲ್ಲಿ 1 ಫೋರ್, 4 ಸಿಕ್ಸರ್ ಬಾರಿಸಿ ಅಜೇಯ 35 ರನ್ ಚಚ್ಚಿದರೆ, ಬಿನ್ನಿ ಕೇವಲ 42 ಎಸೆತಗಳಲ್ಲಿ 5 ಫೋರ್, 6 ಸಿಕ್ಸರ್ನೊಂದಿಗೆ ಅಜೇಯ 82 ರನ್ ಬಾರಿಸಿದರು. ಭಾರತ ಲೆಜೆಂಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 217 ರನ್ ಕಲೆಹಾಕಿತು. ದ. ಆಫ್ರಿಕಾ ಲೆಜೆಂಡ್ಸ್ ಪರ ಜೆ ವಂಡರ್ವಾತ್ 2 ವಿಕೆಟ್ ಪಡೆದರು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಲೆಜೆಂಡ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ನಂತರ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಯಿತು. ನಾಯಕ ಜಾಂಡಿ ರೋಡ್ಸ್ 38 ರನ್‌ಗಳಿಸಿ ತಂಡದ ಪರವಾಗಿ ಅಧಿಕ ರನ್‌ಗಳಿಸಿದ ಆಟಗಾರ ಎನಿಸಿದರು. ಉಳಿದಂತೆ ಯಾವ ಆಟಗಾರರಿಂದಲೂ ಹೆಚ್ಚಿನ ಪ್ರತಿರೋಧ ಬಾರಲಿಲ್ಲ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 156 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ ಮೂಲಕ 61 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು. ಭಾರತ ಪರ ರಾಹುಲ್ ಶರ್ಮಾ 3 ವಿಕೆಟ್ ಕಿತ್ತರೆ, ಮುನಾಫ್ ಪಟೆಲ್ ಹಾಗೂ ಪ್ರಗ್ಯಾನ್ ಓಜಾ ತಲಾ 2 ವಿಕೆಟ್ ಪಡೆದರು.
Published On - 9:45 am, Sun, 11 September 22