Asia Cup Final: ಇಂದು ಏಷ್ಯಾಕಪ್ 2022 ಫೈನಲ್: ಪ್ರಶಸ್ತಿಗಾಗಿ ಶ್ರೀಲಂಕಾ-ಪಾಕಿಸ್ತಾನ ಸೆಣೆಸಾಟ
Sri Lanka vs Pakistan, Final: ಇಂದು ದುಬೈಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು ದಸುನ್ ಶನಕ ನಾಯಕತ್ವದ ಶ್ರೀಲಂಕಾ ಹಾಗೂ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ.
ಹದಿನೈದನೆ ಆವೃತ್ತಿಯ ಏಷ್ಯಾಕಪ್ (Asia Cup) ಅಂತಿಮ ಘಟ್ಟಕ್ಕೆ ಬಂದುನಿಂತಿದೆ. ಇಂದು ದುಬೈಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು ದಸುನ್ ಶನಕ ನಾಯಕತ್ವದ ಶ್ರೀಲಂಕಾ ಹಾಗೂ ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ (Sri Lanka vs Pakistan) ತಂಡಗಳು ಮುಖಾಮುಖಿ ಆಗಲಿದೆ. ಉಭಯ ತಂಡಗಳು ಸಾಕಷ್ಟು ಬಲಿಷ್ಠವಾಗಿದ್ದು ಹೈವೋಲ್ಟೇಜ್ ಮ್ಯಾಚ್ ಆಗುವುದರಲ್ಲಿ ಅನುಮಾನವಿಲ್ಲ. ಒಂದು ದಿನದ ಹಿಂದೆಯಷ್ಟೆ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಲಂಕಾ–ಪಾಕ್ ಎದುರಾಗಿತ್ತು. ಇದರಲ್ಲಿ ಲಂಕಾ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಲಂಕಾ ಈ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಇತ್ತ ಪಾಕಿಸ್ತಾನಕ್ಕೆ ಪ್ರಶಸ್ತಿ ಮುಖ್ಯವಾಗಿದೆ.
ಸೋಲಿನೊಂದಿಗೆ ಏಷ್ಯಾಕಪ್ 2022 ಟೂರ್ನಿ ಆರಂಭಿಸಿದ್ದ ಲಂಕಾ ನಿಧಾನವಾಗಿ ಲಯ ಕಂಡುಕೊಂಡಿತು. ಈಗ ಬ್ಯಾಟಿಂಗ್–ಬೌಲಿಂಗ್ನಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದೆ. ಲಂಕಾಕ್ಕೆ ಕೂಡ ಈ ಪ್ರಶಸ್ತಿ ತುಂಬಾನೆ ಮುಖ್ಯ. ಯಾಕೆಂದರೆ ಕಳೆದ ಕೆಲ ಸಮಯಗಳಿಂದ ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟದಿಂದ ಸಿಂಹಳೀಯರ ದೇಶ ನಲುಗಿದೆ. ಏಷ್ಯಾ ಕಪ್ ಗೆದ್ದು ತನ್ನ ದೇಶದ ಜನರ ನೋವನ್ನು ಅಲ್ಪ ಮರೆಸುವ ಅವಕಾಶ ಶನಕ ಬಳಗಕ್ಕೆ ದೊರೆತಿದೆ.
ಲಂಕಾ ಪರ ಕುಸಾಲ್ ಮೆಂಡಿಸ್ ಮತ್ತು ಪಥುಮ್ ನಿಸಾಂಕ ಉತ್ತಮ ಆರಂಭ ನೀಡುತ್ತಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಮಧ್ಯಮ ಕ್ರಮಾಂಕದಲ್ಲಿ ಧನುಷ್ಕಾ ಗುಣತಿಲಕ, ಭನುಕಾ ರಾಜಪಕ್ಷ ಮತ್ತು ದಸುನ್ ಶನಕ ಆಧಾರವಾಗುತ್ತಿದ್ದಾರೆ. ವನಿಂದು ಹಸರಂಗ ಸ್ಪಿನ್ ಜಾದು ಕೆಲಸ ಮಾಡುತ್ತಿದ್ದು ಇವರಿಗೆ ಮಹೀಶ್ ತೀಕ್ಷಣ ಉತ್ತಮ ಸಾಥ್ ನೀಡುತ್ತಿದ್ದಾರೆ. ದಿಲ್ಶಾನ್ ಮಧುಶಂಕ ಹಾಗೂ ಪ್ರಮೋದ್ ಮಧುಶನ್ ಮಾರಕ ದಾಳಿ ಸಂಘಟಿಸಬೇಕಿದೆ.
ಇತ್ತ ಪಾಕಿಸ್ತಾನಕ್ಕೆ ನಾಯಕ ಬಾಬರ್ ಅಜಮ್ ಫಾರ್ಮ್ ದೊಡ್ಡ ಚಿಂತೆಯಾಗಿದೆ. ಈ ಬಾರಿಯ ಏಷ್ಯಾಕಪ್ನಲ್ಲಿ ಬಾಬರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇಂದು ಫೈನಲ್ ಕದನ ಆಗಿರುವುದರಿಂದ ಇವರ ಮೇಲೆ ಸಾಕಷ್ಟು ಒತ್ತಡವಿದೆ. ಮೊಹಮ್ಮದ್ ರಿಜ್ವಾನ್ ಕೂಡ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಫಖರ್ ಜಮನ್, ಇಫ್ತಿಖರ್ ಅಹ್ನದ್, ಕುಶ್ದಿಲ್ ಹಾಗೂ ನವಾಜ್ ಬ್ಯಾಟಿಂಗ್ನಲ್ಲಿ ಇನ್ನಷ್ಟು ಕೊಡುಗೆ ನೀಡಬೇಕು. ಪಾಕ್ ತಂಡದ ಬಲ ಬೌಲಿಂಗ್ ವಿಭಾಗ. ನಸೀಮ್ ಶಾ, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ಹಸ್ನೈನ್ ವೇಗಿಗಳಾದರೆ, ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಸ್ಪಿನ್ ವಿಭಾಗದಲ್ಲಿ ಮಿಂಚುತ್ತಿದ್ದಾರೆ.
ದುಬೈ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಸಾಮಾನ್ಯವಾಗಿ 160-170ರಷ್ಟು ರನ್‌ಗಳಿಸಿದರೆ ಸ್ಪರ್ಧಾತ್ಮಕ ಸ್ಕೋರ್ ಗಳಿಸಿದಂತಾಗುತ್ತದೆ. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 182 ರನ್‌ಗಳ ಗುರಿ ನೀಡಿಯೂ ಅದನ್ನು ರಕ್ಷಿಸಲು ವಿಫಲವಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇನ್ನು ನೇರ ಬೌಂಡರಿಗಳು ಚಿಕ್ಕದಾಗಿದ್ದು ಅದರ ಲಾಭವನ್ನು ಬ್ಯಾಟರ್‌ಗಳು ಪಡೆದುಕೊಳ್ಳಬಹುದು. ಸೀಮ್ ಹಾಗೂ ಬೌನ್ಸ್‌ಗೆ ಅನುಕೂಲವಾಗಲಿದ್ದು ಸ್ಪಿನ್ನರ್‌ಗಳಿಗೆ ಕಡಿಮೆ ನೆರವು ದೊರೆಯಲಿದೆ. ಪಂದ್ಯದ ಸಮಯದಲ್ಲಿ ಮಳೆಯಾಗುವ ಯಾವುದೇ ಸಂಭವವಿಲ್ಲ.
ಸಂಭಾವ್ಯ ಪ್ಲೇಯಿಂಗ್ XI:
ಶ್ರೀಲಂಕಾ: ದನುಷ್ಕ ಗುಣತಿಲಕ, ಪಥುಮ್ ನಿಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಫಖರ್ ಜಮಾನ್, ಇಫ್ತಿಕಾರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಆಸಿಫ್ ಅಲಿ, ಕುಶ್ದಿಲ್ ಶಾ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನೈನ್.
ಪಂದ್ಯ ಆರಂಭ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪರ್ಟ್ಸ್ ನೆಟ್‌ವರ್ಕ್, ಡಿಸ್ನಿ ಪ್ಲಸ್ ಹಾಟ್.
Published On - 8:36 am, Sun, 11 September 22