ಹದಿನೈದನೇ ಆವೃತ್ತಿಯ ಏಷ್ಯಾಕಪ್ 2022 (Asia Cup 2022) ಟೂರ್ನಿ ರೋಚಕತೆ ಸೃಷ್ಟಿಸಿದೆ. ಗ್ರೂಪ್ ಹಂತದ ಎಲ್ಲ ಪಂದ್ಯಗಳು ಮುಕ್ತಾಯಗೊಂಡಿದ್ದು ಇಂದಿನಿಂದ ಸೂಪರ್ 4 ಹಂತದ ಪಂದ್ಯಗಳು ಶುರುವಾಗಲಿದೆ. ಸೂಪರ್ 4 ಹಂತಕ್ಕೆ ಗ್ರೂಪ್ ಎ ಯಿಂದ ಭಾರತ ಹಾಗೂ ಪಾಕಿಸ್ತಾನ (India vs Pakistan), ಗ್ರೂಪ್ ಬಿ ಯಿಂದ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತೇರ್ಗಡೆಯಾಗಿದೆ. ಸೂಪರ್ 4 (Super 4) ಹಂತದ ನಿಯಮದ ಪ್ರಕಾರ ಪ್ರತಿ ತಂಡ ಉಳಿದ ಮೂರು ತಂಡಗಳ ವಿರುದ್ಧವೂ ಕಣಕ್ಕಿಳಿಯಲಿದೆ. ಹೀಗಾಗಿ ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ ಕೂಡ ಮತ್ತೊಮ್ಮೆ ಮುಖಾಮುಖಿ ಆಗಲಿದೆ.
ಸೂಪರ್ 4 ಹಂತದ ಪಂದ್ಯ ಸೆ. 3 ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಬಿ ಗ್ರೂಪ್ನ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಲಿದೆ. ಭಾನುವಾರದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು ಭಾರತ ಹಾಗೂ ಪಾಕಿಸ್ತಾನ ನಡುವೆ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಇನ್ನು ಸೆಪ್ಟೆಂಬರ್ 6 ರಂದು ಭಾರತ ದುಬೈನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. ಸೆಪ್ಟೆಂಬರ್ 7 ರಂದು ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧ ಆಡಬೇಕು. ಸೆ. 8 ರಂದು ಭಾರತ– ಅಫ್ಘಾನಿಸ್ತಾನ ಸೆಣೆಸಾಟ ನಡೆಸಲಿದೆ. ಹಾಗೂ ಸೂಪರ್ 4 ಹಂತದ ಕೊನೆಯ ಪಂದ್ಯ ಸೆಪ್ಟೆಂಬರ್ 9 ರಂದು ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ.
ಸೂಪರ್ 4 ಹಂತದಲ್ಲಿ ಕೂಡ ಪಾಯಿಂಟ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲ ಮತ್ತು 2ನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿದೆ. ಅಂದರೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಗಳೇ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ. ಏಷ್ಯಾಕಪ್ 2022 ಫೈನಲ್ ಫೈಟ್ ಸೆಪ್ಟೆಂಬರ್ 11 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸೂಪರ್– 4 ವೇಳಾಪಟ್ಟಿ:
ಸೆಪ್ಟೆಂಬರ್ 3 – ಅಫ್ಘಾನಿಸ್ತಾನ್ vs ಶ್ರೀಲಂಕಾ– ಶಾರ್ಜಾ
ಸೆಪ್ಟೆಂಬರ್ 4 – ಭಾರತ vs ಪಾಕಿಸ್ತಾನ– ದುಬೈ
ಸೆಪ್ಟೆಂಬರ್ 6 – ಶ್ರೀಲಂಕಾ vs ಭಾರತ– ದುಬೈ
ಸೆಪ್ಟೆಂಬರ್ 7 – ಪಾಕಿಸ್ತಾನ vs ಅಫ್ಘಾನಿಸ್ತಾನ್ – ದುಬೈ
ಸೆಪ್ಟೆಂಬರ್ 8 – ಭಾರತvs ಅಫ್ಘಾನಿಸ್ತಾನ್ – ದುಬೈ
ಸೆಪ್ಟೆಂಬರ್ 9 – ಶ್ರೀಲಂಕಾ vs ಪಾಕಿಸ್ತಾನ– ದುಬೈ
ಸೆಪ್ಟೆಂಬರ್ 11 – ಫೈನಲ್ ಪಂದ್ಯ– ದುಬೈ
ಜಡೇಜಾ ಔಟ್:
ಸೂಪರ್-4 ಗೆ ಎಂಟ್ರಿಕೊಟ್ಟಿರುವ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದಿದ್ದಾರೆ. ಜಡೇಜಾ ಹೊರಗುಳಿಯಲು ಕಾರಣ ಮೊಣಕಾಲು ಗಾಯ. ಗಾಯದ ಸಮಸ್ಯೆಯಿಂದ ಜಡೇಜಾ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮಾಹಿತಿ ನೀಡಿದ್ದು, ಅವರ ಸ್ಥಾನಕ್ಕೆ ಅಕ್ಸರ್ ಪಟೇಲ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಈ ಕಾರಣದಿಂದಾಗಿ ಅವರು ತಂಡದಿಂದ ಔಟಾಗಿದ್ದಾರೆ. ಜಡೇಜಾ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದು ತಿಳಿದಿಲ್ಲ, ಆದರೆ ಟಿ 20 ವಿಶ್ವಕಪ್ ಹತ್ತಿರದಲ್ಲಿದ್ದು, ಈ ಸುದ್ದಿ ಟೀಮ್ ಇಂಡಿಯಾಕ್ಕೆ ಬರಸಿಡಿಲಿನಂತೆ ಎರಗಿದೆ.
Published On - 8:26 am, Sat, 3 September 22