- Kannada News Sports 11 athletes were brutally murdered now the family will get Rs 223 crore compensation
ಉಗ್ರರ ದಾಳಿಗೆ 11 ಒಲಿಂಪಿಕ್ಸ್ ಅಥ್ಲೀಟ್‌ಗಳ ದಾರುಣ ಸಾವು; 223 ಕೋಟಿ ರೂ. ಪರಿಹಾರ ಘೋಷಿಸಿದ ಜರ್ಮನ್ ಸರ್ಕಾರ
ಪ್ಯಾಲೆಸ್ತೀನ್ ಭಯೋತ್ಪಾದಕರು 11 ಇಸ್ರೇಲಿ ಅಥ್ಲೀಟ್‌ಗಳನ್ನು ಕೊಂದು ಮುಗಿಸಿದ್ದರು. ಇವರಲ್ಲಿ 2 ಅಥ್ಲೀಟ್‌ಗಳು ದಾಳಿಯಲ್ಲಿ ಸಾವನ್ನಪ್ಪಿದ್ದರೆ, 9 ಮಂದಿ ಒತ್ತೆಯಾಳಾಗಿ ಸಾವನ್ನಪ್ಪಿದ್ದರು.
Updated on: Sep 02, 2022 | 7:28 PM

ಸೆಪ್ಟೆಂಬರ್ 5, 1972... ಇದು ಭಯೋತ್ಪಾದಕರು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ದಿನಾಂಕ. ಜರ್ಮನಿಯಲ್ಲಿ ನಡೆದ ಮ್ಯೂನಿಚ್ ಒಲಿಂಪಿಕ್ಸ್ ಕ್ರೀಡಾ ಗ್ರಾಮವನ್ನು ಪ್ರವೇಶಿಸಿದ ಪ್ಯಾಲೆಸ್ತೀನ್ ಭಯೋತ್ಪಾದಕರು 11 ಇಸ್ರೇಲಿ ಅಥ್ಲೀಟ್‌ಗಳನ್ನು ಕೊಂದು ಮುಗಿಸಿದ್ದರು. ಇವರಲ್ಲಿ 2 ಅಥ್ಲೀಟ್‌ಗಳು ದಾಳಿಯಲ್ಲಿ ಸಾವನ್ನಪ್ಪಿದ್ದರೆ, 9 ಮಂದಿ ಒತ್ತೆಯಾಳಾಗಿ ಸಾವನ್ನಪ್ಪಿದ್ದರು. ಈಗ ಈ ದಾಳಿಯ 50 ನೇ ವಾರ್ಷಿಕೋತ್ಸವವಾಗಿದ್ದು, ಅದಕ್ಕೂ ಮೊದಲು ಜರ್ಮನ್ ಸರ್ಕಾರವು ದೊಡ್ಡ ಘೋಷಣೆ ಮಾಡಿದೆ.

ಇಸ್ರೇಲ್ ಅಥ್ಲೀಟ್‌ಗಳ ಕುಟುಂಬಕ್ಕೆ ಜರ್ಮನ್ 25 ಮಿಲಿಯನ್ ಯುರೋ (223 ಕೋಟಿ ರೂ.) ಪರಿಹಾರ ಘೋಷಿಸಿದೆ. ಜರ್ಮನ್ ಮತ್ತು ಇಸ್ರೇಲಿ ಅಧ್ಯಕ್ಷರು ಜಂಟಿ ಹೇಳಿಕೆಯನ್ನು ನೀಡಿದ್ದು, ಸತ್ತರವರನ್ನು ಮರಳಿ ಬದುಕಿಸಲು ಸಾಧ್ಯವಿಲ್ಲ, ಆದರೆ ಐತಿಹಾಸಿಕ ಅನ್ಯಾಯಕ್ಕೆ ಪ್ರಾಯಶ್ಚಿತ್ತದ ದಿಕ್ಕಿನಲ್ಲಿ ಹೆಜ್ಜೆ ಹಾಕಬಹುದು ಎಂದಿದ್ದಾರೆ.

ಸೆಪ್ಟೆಂಬರ್ 5, 1972 ರಂದು, ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಸಂಘಟನೆಯ 8 ಬಂದೂಕುಧಾರಿಗಳು ಒಲಿಂಪಿಕ್ ಗ್ರಾಮದಲ್ಲಿ ತಂಗಿದ್ದ ಇಸ್ರೇಲಿ ತಂಡದ ಮೇಲೆ ದಾಳಿ ಮಾಡಿದ್ದರು. ದಾಳಿಯಲ್ಲಿ ಇಬ್ಬರು ಅಥ್ಲೀಟ್‌ಗಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದರೆ, ಒಂಬತ್ತು ಅಥ್ಲೀಟ್‌ಗಳನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಪಶ್ಚಿಮ ಜರ್ಮನಿಯ ಪೊಲೀಸರು ಇಸ್ರೇಲಿ ಕ್ರೀಡಾಪಟುಗಳನ್ನು ರಕ್ಷಿಸಲು ಅಭಿಯಾನವನ್ನು ಪ್ರಾರಂಭಿಸಿದ್ದರು. ಆದರೆ ಇದರ ಹೊರತಾಗಿಯೂ, 9 ಒತ್ತೆಯಾಳುಗಳು ಪ್ರಾಣ ಕಳೆದುಕೊಂಡರು.

ಇಸ್ರೇಲಿ ಅಥ್ಲೀಟ್‌ಗಳನ್ನು ರಕ್ಷಿಸುವ ಆ ಕಾರ್ಯಾಚರಣೆಯಲ್ಲಿ, 8 ದಾಳಿಕೋರರಲ್ಲಿ 5 ಜನರು ಹತರಾದರೆ, ಅದರಲ್ಲಿ ಒಬ್ಬ ಪೊಲೀಸ್ ತನ್ನ ಪ್ರಾಣವನ್ನು ಕಳೆದುಕೊಂಡರು. ಇಸ್ರೇಲ್ ಅಥ್ಲೀಟ್‌ಗಳನ್ನು ರಕ್ಷಿಸಲು ಜರ್ಮನಿ ಸರ್ಕಾರ ನಡೆಸಿದ ಕಾರ್ಯಾಚರಣೆಯಲ್ಲಿ ದೊಡ್ಡ ತಪ್ಪು ನಡೆದಿದ್ದು, ಇಸ್ರೇಲ್ ಇದನ್ನು ನಿರಂತರವಾಗಿ ಹೇಳುತ್ತಲೇ ಬಂದಿದೆ.

ಇದನ್ನು ಎದುರಿಸಲು ಇಸ್ರೇಲ್ ತನ್ನ ವಿಶೇಷ ಕಮಾಂಡೋ ತಂಡವನ್ನು ಜರ್ಮನಿಗೆ ಕಳುಹಿಸಲು ಬಯಸಿತು, ಆದರೆ ಜರ್ಮನ್ ಸರ್ಕಾರವು ಈ ಪ್ರಸ್ತಾಪವನ್ನು ತಿರಸ್ಕರಿಸಿತು. ಇದರ ನಂತರ ಜರ್ಮನ್ ಪೋಲೀಸರ ಕಾರ್ಯಾಚರಣೆ ವಿಫಲವಾಗಿ, ಆ ಘಟನೆಯಲ್ಲಿ ಎಲ್ಲಾ ಇಸ್ರೇಲಿ ಕ್ರೀಡಾಪಟುಗಳು ಕೊಲ್ಲಲ್ಪಟ್ಟರು.
