ಭಾರತ ಮತ್ತು ವೆಸ್ಟ್ ಇಂಡೀಸ್ (WI vs IND) ನಡುವಣ ಏಕದಿನ ಸರಣಿಯ ಮೂರನೇ ಪಂದ್ಯ ಬುಧವಾರ ನಡೆಯಲಿದೆ. ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಔಪಚಾರಿಕವಾಗಿದೆ. ಏಕೆಂದರೆ ಈಗಾಗಲೇ ಟೀಮ್ ಇಂಡಿಯಾ (Team India) ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡು ಸರಣಿಯನ್ನು ವಶಪಡಿಸಿಕೊಂಡಿದೆ. ಹೀಗಾಗಿ ಮೂರನೇ ಪಂದ್ಯದಲ್ಲೂ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಮತ್ತೊಂದೆಡೆ, ಕೆರಿಬಿಯನ್ ತಂಡವು ಕೊನೆಯ ಪಂದ್ಯವನ್ನು ಗೆಲ್ಲುವ ವೈಟ್ ವಾಶ್ ತಪ್ಪಿಸುವ ಇರಾದೆಯಲ್ಲಿದೆ. ಈಗಾಗಲೇ ಸರಣಿ ಟೀಮ್ ಇಂಡಿಯಾ ಪಾಲಾಗಿರುವ ಕಾರಣ ಮೂರನೇ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ. ಏಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಗದ ಆಟಗಾರರು ತಂಡದಲ್ಲಿದ್ದು, ಹೀಗಾಗಿ ಇವರನ್ನು ಮೂರನೇ ಪಂದ್ಯದಲ್ಲಿ ಕಣಕ್ಕಿಳಿಸಬಹುದು.
ಧವನ್ ಮತ್ತು ಗಿಲ್ ಹಿಟ್ ಜೋಡಿ:
ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಯಶಸ್ಸು ಸಾಧಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ, ಧವನ್ 97 ರನ್‌ಗಳ ಅತ್ಯುತ್ತಮ ಅರ್ಧಶತಕ ಬಾರಿಸಿದ್ದರು. ಅದೇ ಸಮಯದಲ್ಲಿ, ಗಿಲ್ ಮೊದಲ ಪಂದ್ಯದಲ್ಲಿ 64 ರನ್ ಮತ್ತು ಎರಡನೇ ಪಂದ್ಯದಲ್ಲಿ 43 ರನ್ ಗಳಿಸಿದರು. ಅಷ್ಟೇ ಅಲ್ಲದೆ, ಮೊದಲ ಏಕದಿನ ಪಂದ್ಯದಲ್ಲಿ ಈ ಜೋಡಿ ಶತಕದ ಜೊತೆಯಾಟವನ್ನು ಸಹ ಆಡಿತ್ತು. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 48 ರನ್ ಕಲೆಹಾಕಿತ್ತು. ಹೀಗಾಗಿ ಈ ಆರಂಭಿಕ ಜೋಡಿಯನ್ನು ಬದಲಾಯಿಸುವ ಸಾಧ್ಯತೆ ಕಡಿಮೆ ಎನ್ನಬಹುದು.
ಮಧ್ಯಮ ಕ್ರಮಾಂಕವು ಹೀಗಿರಬಹುದು:
ಅಮೋಘ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್ ಜೊತೆಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ಅವರ ಹೆಗಲ ಮೇಲಿರುತ್ತದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅಯ್ಯರ್ ಮೂರನೇ ಸ್ಥಾನದ ಕೊರತೆಯನ್ನು ನೀಗಿಸಿಕೊಂಡಿದ್ದಾರೆ. ಇದಲ್ಲದೇ ಮೂರನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಇದಲ್ಲದೇ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಸಂಜು ಸ್ಯಾಮ್ಸನ್ ಮಿಂಚಿದ್ದಾರೆ. ಮತ್ತೊಂದೆಡೆ ಎರಡನೇ ಏಕದಿನ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡುವ ಮೂಲಕ ಹೂಡಾ ಎಲ್ಲರ ಮನ ಗೆದ್ದಿದ್ದಾರೆ. ಇದಾಗ್ಯೂ ಇಶಾನ್ ಕಿಶನ್ಗೆ ಅವಕಾಶ ರೂಪಿಸಲು ಮಧ್ಯಮ ಕ್ರಮಾಂಕದಿಂದ ಓರ್ವ ಆಟಗಾರನನ್ನು ಕೈ ಬಿಡುವ ಸಾಧ್ಯತೆಯಿದೆ.
ಹಾಗೆಯೇ ಮೂರನೇ ಏಕದಿನ ಪಂದ್ಯದಲ್ಲೂ ಆಲ್ ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ಜೋಡಿಯನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಬಹುದು. ಈ ಇಬ್ಬರೂ ಆಟಗಾರರು ಇದುವರೆಗೆ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಎರಡನೇ ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಅಕ್ಷರ್ ಪಟೇಲ್ 3ನೇ ಏಕದಿನ ಪಂದ್ಯದಲ್ಲೂ ಕಾಣಿಸಿಕೊಳ್ಳುವುದು ಖಚಿತ.
ಇನ್ನು 2ನೇ ಏಕದಿನ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಬದಲಿಗೆ ಅವೇಶ್ ಖಾನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ದುಬಾರಿ ಎನಿಸಿಕೊಂಡಿದ್ದ ಅವೇಶ್ ಅವರನ್ನು 3ನೇ ಪಂದ್ಯದಿಂದ ಕೈ ಬಿಡಬಹುದು. ಅವರ ಸ್ಥಾನದಲ್ಲಿ ಯುವ ವೇಗಿ ಅರ್ಷದೀಪ್ ಸಿಂಗ್ಗೆ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು. ಹೀಗಾಗಿ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.