India vs New Zealand 1st T20: ಭಾರತ-ನ್ಯೂಜಿಲೆಂಡ್ ನಡುವಣ ಟಿ20 ಸರಣಿಯು ಶುಕ್ರವಾರದಿಂದ (ಜ.27) ಶುರುವಾಗಲಿದೆ. ಮೊದಲ ಪಂದ್ಯಕ್ಕೆ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಏಕದಿನ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ನ್ಯೂಜಿಲೆಂಡ್ ತಂಡವು ಟಿ20 ಸರಣಿ ಗೆಲುವಿನ ಮೂಲಕ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಬಳಗವು ಮೊದಲ ಪಂದ್ಯದಲ್ಲೇ ಕಿವೀಸ್ ಪಡೆಯನ್ನು ಬಗ್ಗು ಬಡಿದು ಶುಭಾರಂಭ ಮಾಡುವ ಇರಾದೆಯಲ್ಲಿದೆ. ಹೀಗಾಗಿ ಉಭಯ ತಂಡಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಬಹುದು.
ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗೆಯೇ ಗಾಯಗೊಂಡಿರುವ ರುತುರಾಜ್ ಗಾಯಕ್ವಾಡ್ ಕೂಡ ಕಣಕ್ಕಿಳಿಯುವುದು ಅನುಮಾನ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲೂ ಮಹತ್ವದ ಬದಲಾವಣೆ ಕಂಡು ಬರಲಿದೆ.
ಅದರಂತೆ ಆರಂಭಿಕರಾಗಿ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ ಬ್ಯಾಟ್ ಬೀಸಲಿದ್ದಾರೆ. 4ನೇ ಕ್ರಮಾಂಕದಲ್ಲಿ ಎಂದಿನಂತೆ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ.
ನಾಯಕ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದು, 6ನೇ ಕ್ರಮಾಂಕದಲ್ಲಿ ಮತ್ತೋರ್ವ ಆಲ್ರೌಂಡರ್ ದೀಪಕ್ ಹೂಡಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇನ್ನು ಸ್ಪಿನ್ ಆಲ್ರೌಂಡರ್ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ಸಿಗಲಿದೆ.
ಹಾಗೆಯೇ ಪರಿಪೂರ್ಣ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಾಲ್ ಕಾಣಿಸಿಕೊಂಡರೆ, ವೇಗಿಗಳಾಗಿ ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಹಾಗೂ ಶಿವಂ ಮಾವಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.
ಟೀಮ್ ಇಂಡಿಯಾ ಟಿ20 ತಂಡ ಹೀಗಿದೆ:
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.