ಭಾರತ-ದಕ್ಷಿಣ ಆಫ್ರಿಕಾ (India vs South Africa T20) ನಡುವಣ ಟಿ20 ಸರಣಿ ಜೂನ್ 9 ರಿಂದ ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯಿಂದ ಟೀಮ್ ಇಂಡಿಯಾದ (Team India) ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇತ್ತ ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿಯೇ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಆಟಗಾರರು ಯಾರೆಲ್ಲಾ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಕುತೂಹಲಕ್ಕೆ ಕಿಚ್ಚು ಹಚ್ಚುವಂತೆ ಜೂನ್ 9 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಪ್ಲೇಯಿಂಗ್ 11 ಅನ್ನು ಆಯ್ಕೆ ಮಾಡಿದ್ದಾರೆ.
ವಿಶೇಷ ಎಂದರೆ ರವಿಶಾಸ್ತ್ರಿ ಅವರು ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮತ್ತು ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿದ್ದಾರೆ. ಟೀಮ್ ಇಂಡಿಯಾಕ್ಕೆ ದಿನೇಶ್ ಕಾರ್ತಿಕ್ ಕಂಬ್ಯಾಕ್ ಬಗ್ಗೆ ಶಾಸ್ತ್ರಿ ಬೆಂಬಲ ವ್ಯಕ್ತಪಡಿಸಿದ್ದರೂ, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಿದೆ. ಹೀಗಾಗಿ ದಿನೇಶ್ ಕಾರ್ತಿಕ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಚಾನೆಲ್ವೊಂದರ ಗೇಮ್ ಪ್ಲಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ರವಿ ಶಾಸ್ತ್ರಿ, ‘ಟಿ20ಯಲ್ಲಿ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಟಗಾರನಾಗಿ ರಿಷಬ್ ಪಂತ್ ತಂಡದಲ್ಲಿದ್ದಾರೆ. MS (ಧೋನಿ) ನಿವೃತ್ತಿಯ ನಂತರ ಹೆಚ್ಚು ಫಿನಿಶರ್‌ಗಳಿಲ್ಲದ ಕಾರಣ ಪಂದ್ಯವನ್ನು ಮುಗಿಸುವ ಆಟಗಾರರು ತಂಡದಲ್ಲಿರಬೇಕು. ಹೀಗಾಗಿ ವಿಕೆಟ್ ಕೀಪರ್ ಹಾಗೂ ಫಿನಿಶರ್ ಪಾತ್ರವನ್ನು ಪಂತ್ ನಿರ್ವಹಿಸಲಿದ್ದಾರೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಇನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ತುಂಬಲು ಅಕ್ಷರ್ ಪಟೇಲ್‌ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು. ಹೀಗಾಗಿ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲಿದ್ದಾರೆ. ಇದರಿಂದ ಕುಲ್ದೀಪ್ ಯಾದವ್ಗೆ ಅವಕಾಶ ಸಿಗುವುದಿಲ್ಲ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. ಅದರಂತೆ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ಪ್ಲೇಯಿಂಗ್ ಹೀಗಿರಲಿದೆ ಎಂದು ರವಿಶಾಸ್ತ್ರಿ ಹನ್ನೊಂದು ಆಟಗಾರರನ್ನು ಹೆಸರಿಸಿದ್ದಾರೆ. ಅವರೆಂದರೆ….
ರವಿ ಶಾಸ್ತ್ರಿ ಅವರ ಟೀಮ್ ಇಂಡಿಯಾ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್ ಅಥವಾ ಉಮ್ರಾನ್ ಮಲಿಕ್ ಮತ್ತು ಹರ್ಷಲ್ ಪಟೇಲ್ .
ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಹೀಗಿದೆ:
ಜೂನ್ 9- ಮೊದಲ T20I ಪಂದ್ಯ (ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ)
12 ಜೂನ್- 2 ನೇ T20I ಪಂದ್ಯ (ಬಾರಾಬತಿ ಸ್ಟೇಡಿಯಂ, ಕಟಕ್)
ಜೂನ್ 14- 3ನೇ T20I ಪಂದ್ಯ (ಡಾ. ವೈಎಸ್‌ಆರ್ ರೆಡ್ಡಿ ಸ್ಟೇಡಿಯಂ, ವಿಶಾಖಪಟ್ಟಣಂ)
ಜೂನ್ 17- 4 ನೇ T20I ಪಂದ್ಯ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ರಾಜ್ಕೋಟ್)
ಜೂನ್ 19- 5 ನೇ T20I ಪಂದ್ಯ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಯಿಂದ ಶುರುವಾಗಲಿದೆ. ಇನ್ನು ಈ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ಗಳಲ್ಲಿ ಮತ್ತು ಡಿಸ್ನಿ + ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.