ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಎರಡನೇ ಏಕದಿನ ಪಂದ್ಯ ಇಂದು ನಡೆಯಲಿದ್ದು ಲಂಡನ್ನ ಲಾರ್ಡ್ ಮೈದಾನದಲ್ಲಿ ಆಯೋಜಿಸಲಾಗಿದೆ. ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಜಯ ಸಾಧಿಸಿರುವ ರೋಹಿತ್ ಪಡೆ 1-0 ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯ ಗೆದ್ದರೆ ಆಂಗ್ಲರ ನಾಡಲ್ಲಿ ಟಿ20 ಬಳಿಕ ಏಕದಿನ ಸರಣಿಯನ್ನೂ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಇತ್ತ ಇಂಗ್ಲೆಂಡ್ಗೆ ಮಾನ ಉಳಿಸಿಕೊಳ್ಳಲು ಇದು ಕೊನೆಯ ಅವಕಾಶ. ಬಾಕಿ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಸೋತರೆ ಜೋಸ್ ಬಟ್ಲರ್ (Jos Buttler) ನಾಯಕತ್ವದ ಮೇಲೂ ಪರಿಣಾಮ ಬೀಳಲಿದೆ. ಭಾರತ ಪರ ಇಂಜುರಿಯಿಂದಾಗಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ (Virat Kohli) ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಹಾಗಾದರೆ ದ್ವಿತೀಯ ಏಕದಿನ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದನ್ನು ನೋಡೋಣ.
ಪ್ರಥಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಅಜೇಯ ಶತಕದ ಜೊತೆಯಾಟ ಆಡಿತ್ತು. ಹಿಟ್ಮ್ಯಾನ್ ಅರ್ಧಶತಕ ಸಿಡಿಸಿ ಮಿಂಚಿದ್ದರೆ, ಧವನ್ ಉತ್ತಮ ಸಾಥ್ ನೀಡಿದ್ದರು. ಹೀಗಾಗಿ ಈ ಜೋಡಿಯೂ ಇಂದು ಮೋಡಿ ಮಾಡುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬಂದರೆ ಶ್ರೇಯಸ್ ಅಯ್ಯರ್ ಹೊರಗುಳಿಯಲಿದ್ದಾರೆ. ಕೊಹ್ಲಿ ಅಲಭ್ಯರಾದರೆ ಅಯ್ಯರ್ಗೆ ಮತ್ತೊಂದು ಅವಕಾಶ ಸಿಗಲಿದೆ. ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನಕ್ಕೆ ಫಿಟ್ ಆಗಿದ್ದಾರೆ.
ವಿಕೆಟ್ ಕೀಪರ್ – ಬ್ಯಾಟರ್ ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಆಲ್ರೌಂಡರ್ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ವಹಿಸಿಕೊಳ್ಳುವುದು ಖಚಿತ. ಬೌಲಿಂಗ್ ವಿಭಾಗದಲ್ಲಿ ಭಾರತ ಒಂದು ಬದಲಾವಣೆ ಮಾಡುವ ನಿರೀಕ್ಷೆಯಿದೆ. ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಕಳೆದ ಪಂದ್ಯದಲ್ಲಿ ಮಾರಕವಾಗಿದ್ದರು. ಇಂಗ್ಲೆಂಡ್ ಬ್ಯಾಟರ್ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ಗೆ ಅಟ್ಟಿದ್ದರು. ಹೀಗಾಗಿ ಇವರು ಆಡುವ ಬಳಗದಲ್ಲಿ ಇರಲಿದ್ದಾರೆ.
ಆದರೆ, ಪ್ರಸಿದ್ಧ್ ಕೃಷ್ಣ ಜಾಗದಲ್ಲಿ ಶಾರ್ದೂಲ್ ಥಾಕೂರ್ ಅಥವಾ ಮೊಹಮ್ಮದ್ ಸಿರಾಜ್ ಆಡುವ ಸಾಧ್ಯತೆ ಇದೆ. ಯಾಕೆಂದರೆ ಲಾರ್ಡ್ಸ್ ಕ್ರೀಡಾಂಗಣದ ಪಿಚ್ ಮೊದಲಿನಿಂದಲೂ ಸ್ವಿಂಗ್ ಎಸೆತಗಳಿಗೆ ಹೆಚ್ಚು ನೆರವು ನೀಡುವ ಗುಣ ಹೊಂದಿದೆ. ಹೀಗಾಗಿ ಪಿಚ್ನಲ್ಲಿ ಚೆಂಡು ಹೆಚ್ಚು ಟರ್ನ್ ಆಗುವುದರಿಂದ ಇವರಿಬ್ಬರಲ್ಲಿ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇಲ್ಲಿ 70 ಏಕದಿನ ಪಂದ್ಯಗಳು ನಡೆದಿವೆ. ಅದರಲ್ಲಿ ಇಲ್ಲಿ ದಾಖಲಾದ ಗರಿಷ್ಠ ಮೊತ್ತ 238 ರನ್. ಎರಡೂ ಇನಿಂಗ್ಸ್‌ಗಳಲ್ಲಿಯೂ ಬೌಲರ್‌ಗಳು ಹೆಚ್ಚು ಯಶಸ್ಸು ಕಂಡಿರುವುದರಿಂದ ಬೌಲಿಂಗ್ನಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ.
ಇತ್ತ ಆಂಗ್ಲರ ತಂಡದಲ್ಲಿ ಬೆನ್ ಸ್ಟೋಕ್ಸ್, ಜೋ ರೂಟ್, ಬೈರ್ಸ್ಟೋರಂತಹ ಬಲಿಷ್ಠ ಆಟಗಾರರಿದ್ದರು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡರೆ, ಈ ಪಂದ್ಯದಲ್ಲಿ ಜಯಿಸುವ ಆಸೆ ಈಡೇರಬಹುದು. ಇಂಗ್ಲೆಂಡ್ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠ ಆಗಿರುವುದರಿಂದ ಇದರಲ್ಲಿ ಬದಲಾವಣೆ ಅನುಮಾನ. ಬೌಲಿಂಗ್ನಲ್ಲಿ ಹ್ಯಾರಿ ಬ್ರೂಕ್ ಮತ್ತು ಪಿಲ್ ಸಲ್ಟ್ ಎರಡು ಆಯ್ಕೆಗಳಿದ್ದು ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡರೆ ಅಚ್ಚರಿಪಡಬೇಕಿಲ್ಲ.
ಭಾರತ ಸಂಭಾವ್ಯ ಪ್ಲೇಯಿಂಗ್ XI:
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್.