India Squad: ನಾಲ್ವರ ಕಂಬ್ಯಾಕ್, ಸೂರ್ಯನಿಗೆ ಜಾಕ್​ಪಾಟ್, ಮತ್ತಿಬ್ಬರು ಔಟ್..!

| Updated By: ಝಾಹಿರ್ ಯೂಸುಫ್

Updated on: Aug 21, 2023 | 4:08 PM

India Squad For Asia Cup 2023: ನಾಲ್ವರು ಆಟಗಾರರ ಕಂಬ್ಯಾಕ್ ಜೊತೆಗೆ ಮತ್ತೊಮ್ಮೆ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿದ್ದಾರೆ. ಹಾಗೆಯೇ ಓರ್ವ ಆಟಗಾರ ಚೊಚ್ಚಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

India Squad: ನಾಲ್ವರ ಕಂಬ್ಯಾಕ್, ಸೂರ್ಯನಿಗೆ ಜಾಕ್​ಪಾಟ್, ಮತ್ತಿಬ್ಬರು ಔಟ್..!
Team India
Follow us on

ಏಷ್ಯಾಕಪ್​ಗಾಗಿ ಟೀಮ್ ಇಂಡಿಯಾ (Team India) ಘೋಷಣೆಯಾಗಿದೆ. 17 ಸದಸ್ಯರ ಈ ಬಳಗವನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್​ಗಳಾಗಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ. ಇನ್ನು ನಾಲ್ವರು ಆಟಗಾರರು ಏಷ್ಯಾಕಪ್ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುತ್ತಿದ್ದಾರೆ

  • ಜಸ್​ಪ್ರೀತ್ ಬುಮ್ರಾ: ಬೆನ್ನುನೋವಿನ ಕಾರಣ ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಟಿ20 ಕ್ರಿಕೆಟ್​ಗೆ ಮರಳಿದ್ದರು. ಇದೀಗ ಏಷ್ಯಾಕಪ್​ ಮೂಲಕ ಏಕದಿನ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ.
  • ಕೆಎಲ್ ರಾಹುಲ್: ಐಪಿಎಲ್​ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಕಳೆದ ಕೆಲ ತಿಂಗಳುಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ರಾಹುಲ್ ಕೂಡ ತಂಡಕ್ಕೆ ಮರಳಿದ್ದಾರೆ.
  • ಶ್ರೇಯಸ್ ಅಯ್ಯರ್: ಐಪಿಎಲ್ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಅಯ್ಯರ್ ಕೂಡ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
  • ಪ್ರಸಿದ್ಧ್ ಕೃಷ್ಣ: ಗಾಯದ ಕಾರಣ ಕಳೆದ ಕೆಲ ತಿಂಗಳುಗಳಿಂದ ಭಾರತ ತಂಡದಿಂದ ಹೊರಗುಳಿದಿದ್ದ ಯುವ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ ಏಷ್ಯಾಕಪ್​ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಸೂರ್ಯನಿಗೆ ಜಾಕ್​ಪಾಟ್: ಈ ನಾಲ್ವರು ಆಟಗಾರರ ಕಂಬ್ಯಾಕ್ ಜೊತೆಗೆ ಮತ್ತೊಮ್ಮೆ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾ ಪರ 26 ಏಕದಿನ ಪಂದ್ಯಗಳನ್ನಾಡಿರುವ ಸೂರ್ಯ 24 ರ ಸರಾಸರಿಯಲ್ಲಿ ಕೇವಲ 511 ರನ್​ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಹೊರತಾಗಿಯೂ ಏಷ್ಯಾಕಪ್​ ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.

ಮೀಸಲು ಪಟ್ಟಿಯಲ್ಲಿ ಸ್ಯಾಮ್ಸನ್: ಏಷ್ಯಾಕಪ್​ಗೆ ಆಯ್ಕೆಯಾದ 17 ಆಟಗಾರರಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಲಭಿಸಿಲ್ಲ. ಆದರೆ ಮತ್ತೊಂದೆಡೆ ಅವರು ಏಷ್ಯಾಕಪ್​ ಬಳಗದಿಂದಲೂ ಹೊರಬಿದ್ದಿಲ್ಲ. ಅಂದರೆ ಮೀಸಲು ಆಟಗಾರನಾಗಿ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ವೇಳೆ ಯಾವುದಾದರು ಬ್ಯಾಟರ್ ಗಾಯದ ಕಾರಣ ಹೊರಗುಳಿದರೆ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗಲಿದೆ.

ಚೊಚ್ಚಲ ಎಂಟ್ರಿ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ತಿಲಕ್ ವರ್ಮಾ ಇದೀಗ ಏಷ್ಯಾಕಪ್​ಗೂ ಆಯ್ಕೆಯಾಗಿದ್ದಾರೆ. ಇಲ್ಲಿ ಎಡಗೈ ದಾಂಡಿಗರ ಕೊರತೆ ಹಿನ್ನಲೆಯಲ್ಲಿ ತಿಲಕ್ ವರ್ಮಾಗೆ 17 ಸದಸ್ಯರ ಬಳಗದಲ್ಲಿ ಅವಕಾಶ ನೀಡಲಾಗಿದೆ.

ಏಕೈಕ ಸ್ಪಿನ್ನರ್: ಏಷ್ಯಾಕಪ್​ಗೆ ಆಯ್ಕೆ ಮಾಡಲಾದ ಬಳಗದಲ್ಲಿ ಏಕೈಕ ಪರಿಪೂರ್ಣ ಸ್ಪಿನ್ನರ್​ಗೆ ಅವಕಾಶ ಕಲ್ಪಿಸಲಾಗಿದೆ. ಏಕೆಂದರೆ ತಂಡದಲ್ಲಿ ಸ್ಪಿನ್ ಆಲ್​ರೌಂಡರ್​ಗಳಾಗಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದು, ಹೀಗಾಗಿ ಕುಲ್ದೀಪ್ ಯಾದವ್ ಅವರನ್ನು ಮಾತ್ರ ಸ್ಪಿನ್ನರ್ ಕೋಟಾದಲ್ಲಿ ಆಯ್ಕೆ ಮಾಡಲಾಗಿದೆ.

ಚಹಲ್-ಅಶ್ವಿನ್ ಔಟ್: 17 ಸದಸ್ಯರ ಬಳಗದಲ್ಲಿ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸ್ಪಿನ್ನರ್​ಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರ ಆಯ್ಕೆಯೊಂದಿಗೆ ಯುಜ್ವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್ ತಂಡದಿಂದ ಹೊರಬಿದ್ದಿದ್ದಾರೆ. ಇಲ್ಲಿ ಆಯ್ಕೆ ಸಮಿತಿ ಇಬ್ಬರು ಸ್ಪಿನ್​ ಆಲ್​ರೌಂಡರ್​ಗಳಿಗೆ ಮಣೆಹಾಕಿದ ಪರಿಣಾಮ ಚಹಲ್ ಹಾಗೂ ಅಶ್ವಿನ್ ಅವರನ್ನು ಕೈ ಬಿಡಲಾಗಿದೆ.

ಒಟ್ಟಿನಲ್ಲಿ ಏಷ್ಯಾಕಪ್​ಗಾಗಿ ಬಿಸಿಸಿಐ ಆಯ್ಕೆ ಸಮಿತಿ ಬಲಿಷ್ಠ ತಂಡವನ್ನು ರೂಪಿಸಿದ್ದು, ಈ ಬಳಗ ಈ ಬಾರಿ ಏಷ್ಯಾಕಪ್ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ. ಏಷ್ಯಾಕಪ್​ಗೆ ಆಯ್ಕೆಯಾದ ಭಾರತ ತಂಡ ಈ ಕೆಳಗಿನಂತಿದೆ.

ಟೀಮ್ ಇಂಡಿಯಾ

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).