10 ಇನಿಂಗ್ಸ್ಗಳಲ್ಲಿ 4 ಸೊನ್ನೆ ಸುತ್ತಿದ ಸೂರ್ಯನ ಆಯ್ಕೆಯೇ ಅಚ್ಚರಿ..!
Asia Cup 2023: ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳವನ್ನು ಎದುರಿಸಲಿದೆ. ಹಾಗೆಯೇ ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ನನ್ನ ಏಕದಿನ ಅಂಕಿ ಅಂಶಗಳು ತುಂಬಾ ಕೆಟ್ಟದಾಗಿದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಇದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ನಾಚಿಕೆಯಿಲ್ಲ. ಏಕೆಂದರೆ ಅದನ್ನು ಹೇಗೆ ಉತ್ತಮಗೊಳಿಸಬೇಕು ಎಂಬುದರ ಲೆಕ್ಕಾಚಾರದಲ್ಲಿದ್ದೀನಿ…ಇದು ಎರಡು ವಾರಗಳ ಹಿಂದೆ ಸೂರ್ಯಕುಮಾರ್ ಯಾದವ್ ನೀಡಿದ ಹೇಳಿಕೆ. ಅಂದರೆ ಏಕದಿನ ಕ್ರಿಕೆಟ್ನಲ್ಲಿ ತನ್ನ ಪ್ರದರ್ಶನವು ಅತ್ಯಂತ ಕಳಪೆ ಮಟ್ಟದಲ್ಲಿದೆ ಎಂಬುದನ್ನು ಖುದ್ದು ಸೂರ್ಯಕುಮಾರ್ ಯಾದವ್ ಒಪ್ಪಿಕೊಂಡಿದ್ದರು.
ಆದರೆ ಅಚ್ಚರಿ ಎಂದರೆ ಇದೀಗ ಏಷ್ಯಾಕಪ್ಗೆ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ. ಅದು ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬಳಿಕವೂ ಕೂಡ ಎಂಬುದೇ ಇಲ್ಲಿ ಮತ್ತೊಂದು ಅಚ್ಚರಿ.
ಏಕೆಂದರೆ ಸೂರ್ಯಕುಮಾರ್ ಯಾದವ್ ತಮ್ಮ ಕೊನೆಯ 10 ಏಕದಿನ ಇನಿಂಗ್ಸ್ಗಳಲ್ಲಿ 4 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನುಳಿದ 6 ಇನಿಂಗ್ಸ್ಗಳಲ್ಲಿ ಕಲೆಹಾಕಿದ್ದು ಕೇವಲ 127 ರನ್ಗಳು ಮಾತ್ರ.
ಅಂದರೆ ಕಳೆದ 10 ಇನಿಂಗ್ಸ್ಗಳಲ್ಲಿ 12.7 ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಸೂರ್ಯಕುಮಾರ್ ಯಾದವ್ಗೆ ಇದೀಗ ಏಷ್ಯಾಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಮತ್ತೊಂದೆಡೆ 50 ರ ಸರಾಸರಿಯಲ್ಲಿ ರನ್ ಪೇರಿಸಿರುವ ಸಂಜು ಸ್ಯಾಮ್ಸನ್ ಮೀಸಲು ಆಟಗಾರನ ಪಟ್ಟಿಯಲ್ಲಿದ್ದಾರೆ.
ಸ್ಯಾಮ್ಸನ್ ಅಂಕಿ ಅಂಶಗಳು:
ಸಂಜು ಸ್ಯಾಮ್ಸನ್ ತಮ್ಮ ಕೊನೆಯ 10 ಏಕದಿನ ಇನಿಂಗ್ಸ್ಗಳಲ್ಲಿ 2 ಅರ್ಧಶತಕ ಸಿಡಿಸಿದ್ದಾರೆ. ಹಾಗೆಯೇ ಒಂದು 43 ರನ್ ಬಾರಿಸಿದ್ದರು. ಅಲ್ಲದೆ ಹತ್ತು ಇನಿಂಗ್ಸ್ಗಳಿಂದ 278 ರನ್ ಪೇರಿಸಿದ್ದಾರೆ.
ಇಲ್ಲಿ ಸೂರ್ಯಕುಮಾರ್ ಯಾದವ್ಗಿಂತ ಸಂಜು ಸ್ಯಾಮ್ಸನ್ ಸರಾಸರಿ ಉತ್ತಮವಾಗಿದೆ. ಅಲ್ಲದೆ ಇಬ್ಬರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಸೂರ್ಯಕುಮಾರ್ಗಿಂತ ಸ್ಯಾಮ್ಸನ್ ಆಯ್ಕೆಗೆ ಅರ್ಹರು ಎನ್ನಬಹುದು.
ಇದಾಗ್ಯೂ 12 ರ ಸರಾಸರಿಯಲ್ಲಿ ರನ್ ಪೇರಿಸಿರುವ ಸೂರ್ಯಕುಮಾರ್ ಯಾದವ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಇದು ಯಾವುದೇ ಸರಣಿ ಅಲ್ಲ, ಏಷ್ಯಾಕಪ್ ಟೂರ್ನಿ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೆಲ ನೂನ್ಯತೆಗಳೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ಗಾಗಿ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದ್ದು, ಈ ಟೂರ್ನಿಯಲ್ಲಿನ ಭಾರತ ತಂಡದ ಪ್ರದರ್ಶನ ಏಕದಿನ ವಿಶ್ವಕಪ್ನ ಭವಿಷ್ಯವನ್ನು ನಿರ್ಧರಿಸಲಿದೆ.
ಇದನ್ನೂ ಓದಿ: ಸ್ಪೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದ ರಿಂಕು ಸಿಂಗ್
ಏಷ್ಯಾಕಪ್ಗೆ ಆಯ್ಕೆ ಮಾಡಲಾದ ಭಾರತ ತಂಡ ಈ ಕೆಳಗಿನಂತಿದೆ:
- ಟೀಮ್ ಇಂಡಿಯಾ
- ರೋಹಿತ್ ಶರ್ಮಾ (ನಾಯಕ)
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಕೆಎಲ್ ರಾಹುಲ್ (ವಿಕೆಟ್ ಕೀಪರ್)
- ತಿಲಕ್ ವರ್ಮಾ
- ಇಶಾನ್ ಕಿಶನ್ (ವಿಕೆಟ್ ಕೀಪರ್)
- ಸೂರ್ಯಕುಮಾರ್ ಯಾದವ್
- ಹಾರ್ದಿಕ್ ಪಾಂಡ್ಯ (ಉಪನಾಯಕ)
- ರವೀಂದ್ರ ಜಡೇಜಾ
- ಅಕ್ಷರ್ ಪಟೇಲ್
- ಶಾರ್ದೂಲ್ ಠಾಕೂರ್
- ಕುಲ್ದೀಪ್ ಯಾದವ್
- ಮೊಹಮ್ಮದ್ ಸಿರಾಜ್
- ಜಸ್ಪ್ರೀತ್ ಬುಮ್ರಾ
- ಮೊಹಮ್ಮದ್ ಶಮಿ
- ಪ್ರಸಿದ್ಧ್ ಕೃಷ್ಣ
- ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಏಷ್ಯಾಕಪ್ಗೆ ಕೌಂಟ್ ಡೌನ್ ಶುರು:
ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳವನ್ನು ಎದುರಿಸಲಿದೆ. ಹಾಗೆಯೇ ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
Published On - 6:02 pm, Mon, 21 August 23