IND vs SA: ನಾಲಾಯಕ್ ನಾಯಕ, ಉಪನಾಯಕ; ಭಾರತ ಟಿ20 ತಂಡದಲ್ಲಿರುವುದು 9 ಆಟಗಾರರಷ್ಟೆ

Team India T20: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸೋಲಿಗೆ ಸೂರ್ಯಕುಮಾರ್ ಯಾದವ್ ಮತ್ತು ಶುಭ್​ಮನ್ ಗಿಲ್ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಕಾರಣ. ನಾಯಕ ಸೂರ್ಯಕುಮಾರ್ ಕಳೆದ 20 ಪಂದ್ಯಗಳಲ್ಲಿ ಅರ್ಧಶತಕ ಗಳಿಸಿಲ್ಲ, ಗಿಲ್ ಸಹ T20ಯಲ್ಲಿ ನಿರಂತರವಾಗಿ ವಿಫಲರಾಗಿದ್ದಾರೆ. ಇವರ ಕಳಪೆ ಫಾರ್ಮ್ ಮುಂಬರುವ ಟಿ20 ವಿಶ್ವಕಪ್‌ಗೆ ತಂಡದ ಸಿದ್ಧತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪ್ರತಿಭಾವಂತರಿಗೆ ಅವಕಾಶ ಸಿಗದಿರುವುದು ಆತಂಕಕಾರಿ ಸಂಗತಿಯಾಗಿದೆ.

IND vs SA: ನಾಲಾಯಕ್ ನಾಯಕ, ಉಪನಾಯಕ; ಭಾರತ ಟಿ20 ತಂಡದಲ್ಲಿರುವುದು 9 ಆಟಗಾರರಷ್ಟೆ
Surya, Gill

Updated on: Dec 12, 2025 | 5:55 PM

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) 51 ರನ್​ಗಳ ಸೋಲುಕಂಡಿತು. ತಂಡದ ಸೋಲಿಗೆ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನವೇ ಪ್ರಮುಖ ಕಾರಣ ಎನ್ನಬಹುದು. ಅದರಲ್ಲೂ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಉಪನಾಯಕ ಶುಭ್​ಮನ್ ಗಿಲ್ (Shubman Gill) ಅವರ ಕಳಪೆ ಪ್ರದರ್ಶನ ತಂಡವನ್ನು ಸೋಲಿನ ದವಡೆಗೆ ತಳ್ಳಿತು ಎಂದರೆ ತಪ್ಪಾಗಲಾರದು. ಈ ಇಬ್ಬರು ಆಟಗಾರರಲ್ಲಿ ಪ್ರತಿಭೆಗೆ ಯಾವ ಕೊರತೆಯೂ ಇಲ್ಲ. ಆದರೆ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಈ ಇಬ್ಬರು ತಂಡದ ಇತರ ಆಟಗಾರರು ಒತ್ತಡಕ್ಕೊಳಗಾಗುವಂತೆ ಮಾಡುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಕೇವಲ ಒಂದೆರಡು ಪಂದ್ಯಗಳ ಕಥೆಯಲ್ಲ. ಬದಲಿಗೆ ಇಡೀ ವರ್ಷ ಇವರಿಬ್ಬರ ಬ್ಯಾಟ್ ಮೌನಕ್ಕೆ ಶರಣಾಗಿರುವುದು ತಂಡವನ್ನು ಆತಂಕಕ್ಕಿಡುಮಾಡಿದೆ.

ನಾವು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನೇ ತೆಗೆದುಕೊಂಡರೆ, ಮೊದಲ ಪಂದ್ಯದಲ್ಲೂ ಇವರಿಬ್ಬರ ಆಟ ನಡೆದಿರಲ್ಲಿಲ್ಲ. ಉಪನಾಯಕ ಶುಭ್​ಮನ್ ಗಿಲ್ 4 ರನ್​ಗಳಿಗೆ ಔಟಾದರೆ, ನಾಯಕ ಸೂರ್ಯಕುಮಾರ್ ಯಾದವ್ 12 ರನ್ ಬಾರಿಸುವಷ್ಟರಲ್ಲೇ ಸುಸ್ತಾದರು. ಆದಾಗ್ಯೂ ಇತರ ಆಟಗಾರರ ಪ್ರದರ್ಶನದಿಂದಾಗಿ ತಂಡಕ್ಕೆ ಗೆಲುವು ದಕ್ಕಿತು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಅದು ನಡೆಯಲಿಲ್ಲ. ಈ ಪಂದ್ಯದಲ್ಲೂ ಇವರಿಬ್ಬರ ಆಟ ಹೀನಾಯವಾಗಿತ್ತು. ಉಪನಾಯಕ ಗಿಲ್ ಸೊನ್ನೆ ಸುತ್ತಿದರೆ, ನಾಯಕ ಸೂರ್ಯ 4 ರನ್ ಬಾರಿಸಲಷ್ಟೇ ಶಕ್ತರಾದರು. ಇವರಿಬ್ಬರು ಈ ರೀತಿಯ ಕಳಪೆ ಪ್ರದರ್ಶನ ನೀಡುತ್ತಿರುವುದು ಈ ಸರಣಿಯಲ್ಲಿ ಮಾತ್ರವಲ್ಲ, ಈ ಇಡೀ ವರ್ಷ ಇವರಿಬ್ಬರ ಆಟ ನಡೆದಿರುವುದು ಹೀಗೆ.

ಐಸಿಯುನಲ್ಲಿರುವ ಸೂರ್ಯ

ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕಳೆದ 20 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಅಲ್ಲದೆ ಈ 20 ಪಂದ್ಯಗಳಲ್ಲಿ ಸೂರ್ಯ ಕಲೆಹಾಕಿರುವ ರನ್​ಗಳು ಕೇವಲ 227. ಇನ್ನೊಂದು ಅವಮಾನಕರ ಸಂಗತಿಯೆಂದರೆ ಸೂರ್ಯ ಅವರ ಬ್ಯಾಟಿಂಗ್ ಸರಾಸರಿ ಕೇವಲ 13.35 ಮತ್ತು ಸ್ಟ್ರೈಕ್ ರೇಟ್ 120 ಕ್ಕಿಂತ ಕಡಿಮೆಯಿದೆ. ಸೂರ್ಯಕುಮಾರ್ ಯಾದವ್ ತಮ್ಮ ಕೊನೆಯ 20 ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ 30 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಉಳಿದಂತೆ ಮೂರು ಬಾರಿ ಸೊನ್ನೆ ಸುತ್ತಿರುವ ಸೂರ್ಯ, 10 ಇನ್ನಿಂಗ್ಸ್​ಗಳಲ್ಲಿ 5 ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ.

ಶುಭ್​ಮನ್ ಗಿಲ್ ಕಥೆಯೂ ಇದೆ

ಶುಭ್​ಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಟಿ20ಮಾದರಿಯಲ್ಲಿ ಮಾತ್ರ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಒಂದೇ ವರ್ಷದಲ್ಲಿ 3 ಟಿ20 ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರಿದ್ದರೂ ಗಿಲ್​ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳದ ಗಿಲ್, ಕೊನೆಯ 14 ಟಿ20 ಇನ್ನಿಂಗ್ಸ್‌ಗಳಲ್ಲಿ 23.90 ಸರಾಸರಿಯಲ್ಲಿ ಕೇವಲ 263 ರನ್ ಗಳಿಸಿದ್ದಾರೆ. ಈ ವರ್ಷ, ಗಿಲ್ ಟಿ20ಮಾದರಿಯಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಹಾಗಿದ್ದರೂ ಆಯ್ಕೆ ಮಂಡಳಿ ಗಿಲ್​ಗೆ ಮಣೆ ಹಾಕುತ್ತಿರುವುದು ಅನುಭವಿಗಳ ಹಾಗೂ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಇವರಿಬ್ಬರು ಲೆಕ್ಕಕುಂಟು ಆಟಕ್ಕಿಲ್ಲ

ಸೂರ್ಯಕುಮಾರ್ ಯಾದವ್ ಮತ್ತು ಶುಭ್​ಮನ್ ಗಿಲ್ ಕಳೆದ 15-20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇದರರ್ಥ ಇವರಿಬ್ಬರು ತಂಡದಲ್ಲಿ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಂದರೆ ಈ ಇಬ್ಬರು ನಾಮಕಾವಸ್ತೆಗೆ ತಂಡದಲ್ಲಿದ್ದರೆ, ತಂಡದಲ್ಲಿ ಉಳಿದ 9 ಆಟಗಾರರು ಗೆಲುವಿಗಾಗಿ ಹೋರಾಟ ನಡೆಸಬೇಕಿದೆ. ಪ್ರತಿಭೆಗಳಿಗೆ ಕೊರೆತ ಇಲ್ಲದಿರುವಾಗ ಇವರಿಬ್ಬರಿಗೆ ಇಷ್ಟು ಅವಕಾಶಗಳನ್ನು ನೀಡುತ್ತಿರುವುದು ಪ್ರತಿಭಾವಂತರಿಗೆ ಬಿಸಿಸಿಐ ಮಾಡುತ್ತಿರುವುದು ದ್ರೋಹ ಅಲ್ಲದೆ ಮತ್ತೇನು ಹೇಳಿ?. ಇದೆಲ್ಲದರ ಜೊತೆಗೆ ಟಿ20 ವಿಶ್ವಕಪ್ ಹತ್ತಿರವಾಗುತ್ತಿರುವಾಗ ನಾಯಕ ಮತ್ತು ಉಪನಾಯಕನ ಕಳಪೆ ಫಾರ್ಮ್ ಭಾರತೀಯ ತಂಡದ ನಿರ್ವಹಣೆಗೆ ನಿಜವಾದ ಕಳವಳಕಾರಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Fri, 12 December 25