
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಡುವೆ ಟೀಂ ಇಂಡಿಯಾದಲ್ಲಿ (India vs New Zealand) ಪ್ರಮುಖವಾಗಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಆದಾಗ್ಯೂ ಈ ಬದಲಾವಣೆ ಏಕದಿನ ತಂಡದಲ್ಲಿ ಆಗಿಲ್ಲ. ಬದಲಾಗಿ ಮುಂಬರುವ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ವಾಸ್ತವವಾಗಿ ಭಾರತ ಟಿ20 ತಂಡದಲ್ಲಿ ಇಬ್ಬರು ಆಟಗಾರರು ಪ್ರಸ್ತುತ ಗಾಯಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಸಿಸಿಐ (BCCI) ಗಾಯಗೊಂಡಿರುವ ಆಟಗಾರರ ಬದಲಿಗೆ ಬದಲಿ ಆಟಗಾರರನ್ನು ಘೋಷಿಸಿದೆ. ಅದರಂತೆ ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾ ಅವರ ಬದಲಿಗೆ ರವಿ ಬಿಷ್ಣೋಯ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಜನವರಿ 11 ರಂದು ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಪಕ್ಕೆಲುಬುಗಳಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿತು. ಹೀಗಾಗಿ ಅವರ ಪಂದ್ಯದ ಮಧ್ಯದಲ್ಲೇ ಮೈದಾನದಿಂದ ಹೊರನಡೆದಿದ್ದರು. ಆ ಬಳಿಕ ಸುಂದರ್ ಅವರನ್ನು ಪರೀಕ್ಷಿಸಿದ್ದ ವೈದ್ಯಕೀಯ ತಂಡ ಅವರಿಗೆ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದೆ. ಏತನ್ಮಧ್ಯೆ, ತಿಲಕ್ ವರ್ಮಾ ಈಗಾಗಲೇ ಗಾಯದಿಂದಾಗಿ ಮೊದಲ ಮೂರು ಟಿ20ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ವಾಷಿಂಗ್ಟನ್ ಸುಂದರ್ ಬದಲಿಗೆ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಟಿ20 ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
🚨 News 🚨
Shreyas Iyer & Ravi Bishnoi added to #TeamIndia T20I squad; Washington Sundar ruled out.
Details ▶️ https://t.co/cNWHX9TOVk#INDvNZ | @IDFCFIRSTBank
— BCCI (@BCCI) January 16, 2026
ಮತ್ತೊಂದೆಡೆ, ಗಾಯಗೊಂಡ ತಿಲಕ್ ವರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಅಯ್ಯರ್ ಮೊದಲ ಮೂರು ಟಿ20 ಪಂದ್ಯಗಳಿಗೆ ತಂಡದ ಭಾಗವಾಗಿರುತ್ತಾರೆ. ಈ ಮೂಲಕ ಶ್ರೇಯಸ್ ಅಯ್ಯರ್ ಎರಡು ವರ್ಷಗಳ ನಂತರ ಭಾರತೀಯ ಟಿ20 ತಂಡಕ್ಕೆ ಮರಳಿದ್ದಾರೆ. ಕೊನೆಯ ಬಾರಿಗೆ ಡಿಸೆಂಬರ್ 2023 ರಲ್ಲಿ ಟೀಂ ಇಂಡಿಯಾ ಪರ ಅಯ್ಯರ್ ಟಿ20ಪಂದ್ಯವನ್ನು ಆಡಿದ್ದರು. ಏತನ್ಮಧ್ಯೆ, ರವಿ ಬಿಷ್ಣೋಯ್ ಫೆಬ್ರವರಿ 2025 ರಿಂದ ಟೀಂ ಇಂಡಿಯಾ ಪರ ಟಿ20ಪಂದ್ಯ ಆಡಿಲ್ಲ. ಆದ್ದರಿಂದ, ಈ ಸರಣಿಯು ಇಬ್ಬರೂ ಆಟಗಾರರಿಗೆ ಪ್ರಮುಖ ಅವಕಾಶವಾಗಿದ್ದು, ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಬೇಕಿದೆ.
ಏಕದಿನ ಸರಣಿ ಬಳಿಕ ಟಿ20 ಸರಣಿಯಿಂದಲೂ ವಾಷಿಂಗ್ಟನ್ ಸುಂದರ್ ಔಟ್
ಟಿ20 ಸರಣಿಗೆ ಟೀಂ ಇಂಡಿಯಾ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಮೊದಲ ಮೂರು ಪಂದ್ಯ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಇಶನ್ ಕಿಶನ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 pm, Fri, 16 January 26