
India vs Afghanistan: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಯಿದೆ. ಸತತ ಕ್ರಿಕೆಟ್ ಪಂದ್ಯಗಳ ಒತ್ತಡ ಮತ್ತು ಕಾರ್ಯಭಾರ ನಿರ್ವಹಣೆಯ ಹಿನ್ನೆಲೆಯಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್, ವೇಗಾಸ್ತ್ರ ಜಸ್ಪ್ರೀತ್ ಬುಮ್ರಾ, ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಕೆ.ಎಲ್. ರಾಹುಲ್ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಇವರೊಂದಿಗೆ ಮತ್ತಷ್ಟು ಆಟಗಾರರ ಹೆಸರು ಕೂಡ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇನ್ನು ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿ ಪಡೆಯುವ ಆಟಗಾರರು ನಂತರ ನಡೆಯುವ ಏಕದಿನ ಸರಣಿಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಶುಭ್ಮನ್ ಗಿಲ್ ವಿಶ್ರಾಂತಿ ಪಡೆದರೆ ಹಿರಿಯ ಆಟಗಾರರಲ್ಲಿ ಯಾರಾದರೂ ತಂಡದ ನಾಯಕರಾಗಿ ಕಾಣಿಸಿಕೊಳ್ಳಬಹುದು. ಅಂದರೆ ಅಫ್ಘಾನ್ ವಿರುದ್ಧದ ಟೆಸ್ಟ್ನಲ್ಲಿ ಭಾರತ ತಂಡವನ್ನು ಹೊಸ ನಾಯಕ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಸರಣಿಗೆ ಯುವ ಆಟಗಾರರಾದ ಅಭಿಮನ್ಯು ಈಶ್ವರನ್ ಮತ್ತು ಸಾಯಿ ಸುದರ್ಶನ್ ಆಯ್ಕೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!
ಈ ಸರಣಿಯ ಬಳಿಕ ಟೀಮ್ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಅದಕ್ಕೂ ಮುನ್ನ ಭಾರತದ ‘ಬೆಂಚ್ ಸ್ಟ್ರೆಂತ್’ ಪರೀಕ್ಷಿಸಲು ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಹೀಗಾಗಿ ಅಫ್ಘಾನಿಸ್ತಾನ್ ಸರಣಿಯಲ್ಲಿ ಒಂದಷ್ಟು ಹೊಸ ಮುಖಗಳು ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
Published On - 12:55 pm, Tue, 21 April 26