
ಬೆಕೆನ್‌ಹ್ಯಾಮ್‌ನ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಅಂಡರ್-19 ಮತ್ತು ಇಂಡಿಯಾ ಅಂಡರ್-19 (IND U19 vs ENG U19) ತಂಡಗಳ ನಡುವಿನ ಎರಡು ಪಂದ್ಯಗಳ ಯೂತ್ ಟೆಸ್ಟ್ ಸರಣಿ (Youth Test Series)ಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಅಂಡರ್-19 ತಂಡವು 540 ರನ್‌ಗಳಿಗೆ ಆಲೌಟ್ ಆಗಿದೆ. ತಂಡದ ಪರ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಭರ್ಜರಿ ಶತಕ ಬಾರಿಸಿದರೆ, ಅಭಿಗ್ಯಾನ್ ಕುಂಡು, ರಾಹುಲ್ ಕುಮಾರ್, ವಿಹಾನ್ ಮಲ್ಹೋತ್ರಾ ಮತ್ತು ಆರ್‌ಎಸ್ ಅಂಬರೀಶ್ ಅರ್ಧಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ವೈಭವ್ ಸೂರ್ಯವಂಶಿ ಕೇವಲ 14 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆದರೆ ನಾಯಕನ ಆಟವನ್ನಾಡಿದ ಆಯುಷ್ ತಮ್ಮ ಇನ್ನಿಂಗ್ಸ್‌ನಲ್ಲಿ 115 ಎಸೆತಗಳನ್ನು ಎದುರಿಸಿ 14 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ಸಹಿತ 102 ರನ್ ಬಾರಿಸಿ ಔಟಾದರು. ಆಯುಷ್ಗೆ ಸಾತ್ ನೀಡಿದ ವಿಹಾನ್ ಮಲ್ಹೋತ್ರಾ ಕೂಡ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಐದನೇ ಕ್ರಮಾಂಕದಲ್ಲಿ ಬಂದ ಅಭಿಗ್ಯಾನ್ ಕುಂಡು 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 90 ರನ್ ಬಾರಿಸಿ ಕೇವಲ 10 ರನ್ಗಳಿಂದ ಶತಕ ವಂಚಿತರಾದರು. 6ನೇ ಕ್ರಮಾಂಕದಲ್ಲಿ ಬಂದ ರಾಹುಲ್ ಕುಮಾರ್ ಕೂಡ 14 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 85 ರನ್‌ಗಳ ಕಾಣಿಕೆ ನೀಡಿದರು. ಈ ನಾಲ್ವರ ಕೊಡುಗೆಯಿಂದ ಭಾರತ ತಂಡ ಮೊದಲ ದಿನದಲ್ಲಿ 7 ವಿಕೆಟ್ ನಷ್ಟಕ್ಕೆ 450 ರನ್ ಕಲೆಹಾಕಿತ್ತು.
IND U19 vs ENG U19: ರಾಹುಲ್ ನಂತರ ಇಂಗ್ಲೆಂಡ್ನಲ್ಲಿ ಶತಕ ಸಿಡಿಸಿದ ಆಯುಷ್ ಮ್ಹಾತ್ರೆ
ಇಲ್ಲಿಂದ ಎರಡನೇ ದಿನದಾಟವನ್ನು ಆರಂಭಿಸಿದ ಭಾರತದ ಇನ್ನಿಂಗ್ಸ್ ಮುಂದುವರೆಸಿದ ಅಂಬರೀಶ್ ಮತ್ತು ಹೆನಿಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದರು. ಈ ಸಮಯದಲ್ಲಿ ಅಂಬರೀಶ್ ತಮ್ಮ ಅರ್ಧಶತಕವನ್ನು ಪೂರೈಸಿದಲ್ಲದೆ, ಹೆನಿಲ್ ಪಟೇಲ್ ಅವರೊಂದಿಗೆ ಅರ್ಧಶತಕದ ಪಾಲುದಾರಿಕೆಯನ್ನು ಸಹ ಪೂರ್ಣಗೊಳಿಸಿದರು, ಇದು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 500 ರನ್‌ಗಳ ಗಡಿಯನ್ನು ತಲುಪಲು ಸಹಾಯ ಮಾಡಿತು. ಆದಾಗ್ಯೂ, ಅಂಬರೀಶ್ 70 ರನ್ ಗಳಿಸಿ ಔಟಾದರೆ ಪಟೇಲ್ 38 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ದೀಪೇಶ್ ದೇವೇಂದ್ರನ್ ನಾಲ್ಕು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅನ್ಮೋಲ್‌ಜಿತ್ ಸಿಂಗ್ ಎಂಟು ರನ್ ಗಳಿಸಿ ಅಜೇಯರಾಗಿ ಉಳಿದರು. ಇತ್ತ ಭಾರತವನ್ನು ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ಈ ಸುದ್ದಿ ಬರೆಯುವ ವೇಳೆಗೆ 84 ರನ್ ಬಾರಿಸಿ ಪ್ರಮುಖ 2 ವಿಕೆಟ್ಗಳನ್ನು ಕಳೆದುಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ