IND vs AUS: ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲುವಿನ ಹಾದಿಗೆ ಮರಳುತ್ತಾ ಭಾರತ? ನಾಗ್ಪುರದಲ್ಲಿ ಯಾರು ಬೆಸ್ಟ್?
IND vs AUS: ವೇಗದ ಬೌಲಿಂಗ್‌ನ ಹೊರತಾಗಿ ಸ್ಪಿನ್‌ನಲ್ಲಿಯೂ ಭಾರತದ ಪ್ರದರ್ಶನ ವಿಶೇಷವಾಗಿರಲಿಲ್ಲ. ತಂಡದ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮೊಹಾಲಿಯಲ್ಲಿ ಉತ್ತಮ ಫಾರ್ಮ್ ತೋರಲಿಲ್ಲ.
ಆಸ್ಟ್ರೇಲಿಯ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ (Team India) ಇದೀಗ ಶುಕ್ರವಾರದಂದು ಸರಣಿ ಉಳಿಸಿಕೊಳ್ಳಲು ಮುಂದಾಗಿದೆ. ಟಿ20 ಸರಣಿಯ ಎರಡನೇ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು, ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 208 ರನ್‌ಗಳಿಸಿದ್ದರು ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾ ತನ್ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಉದ್ದೇಶದಿಂದ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇದಕ್ಕಾಗಿ ತಂಡದ ಆಡುವ XIನಲ್ಲೂ ಬದಲಾವಣೆಗಳನ್ನು ಕಾಣಬಹುದು.
ತಂಡಕ್ಕೆ ಬುಮ್ರಾ ಎಂಟ್ರಿ
ನಾಗ್ಪುರ T20 ಗೆ ತಮ್ಮ ಸ್ಟಾರ್ ಬೌಲರ್ ಬುಮ್ರಾ ಅವರನ್ನು ಮರಳಿ ಕರೆತರಲು ಮ್ಯಾನೇಜ್‌ಮೆಂಟ್ ಚಿಂತನೆ ನಡೆಸುತ್ತಿದೆ ಎಂದು ವರದಿಗಳಿವೆ. ಜುಲೈ 14 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡಿದ್ದ ಬುಮ್ರಾ, ಅಂದಿನಿಂದ ಬೆನ್ನುನೋವಿನ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಏಷ್ಯಾಕಪ್‌ನಲ್ಲೂ ಬುಮ್ರಾ ಆಡಲಿಲ್ಲ. ಹೀಗಾಗಿ ಗಾಯದಿಂದ ಚೇತರಿಸಿಕೊಂಡಿದ್ದ ಬುಮ್ರಾ, ಆಸೀಸ್ ವಿರುದ್ಧ ಕಣಕ್ಕಿಳಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯದ ಬುಮ್ರಾ ಅಲಭ್ಯತೆಯಿಂದ ಟೀಂ ಇಂಡಿಯಾ ಭಾರೀ ಬೆಲೆಯನ್ನೇ ತೆತ್ತಬೇಕಾಯಿತು. ಹೀಗಾಗಿ 2ನೇ ಪಂದ್ಯಕ್ಕೆ ಬುಮ್ರಾ ತಂಡದ ಮರಳುವಿಕೆಯನ್ನು ಫಿಕ್ಸ್ ಎಂದು ಪರಿಗಣಿಸಲಾಗಿದೆ.
ವೇಗದ ಬೌಲಿಂಗ್ ಭಾರತದ ಆತಂಕಕ್ಕೆ ಕಾರಣ
ವೇಗದ ಬೌಲಿಂಗ್ ವಿಭಾಗ ಭಾರತ ತಂಡಕ್ಕೆ ಚಿಂತೆಯ ವಿಷಯವಾಗಿದೆ. ತಂಡದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಡೆತ್ ಓವರ್‌ಗಳಲ್ಲಿ ದುಬಾರಿಯಾಗುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಅತ್ಯಂತ ದುಬಾರಿ ಎನಿಸಿಕೊಂಡಿದ್ದ ಭುವಿ, ಆಸ್ಟ್ರೇಲಿಯಾ ವಿರುದ್ಧವೂ 19 ನೇ ಓವರ್‌ನಲ್ಲಿ ಭಾರಿ ರನ್ ಬಿಟ್ಟುಕೊಟ್ಟರು. ಒಟ್ಟಾರೆ ಮೂರು ತಂಡಗಳ ವಿರುದ್ಧ ಭುವಿ, ಈ ಮೂರು ಓವರ್‌ಗಳಲ್ಲಿ ಬರೋಬ್ಬರಿ 49 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಕೂಡ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್ ತಯಾರಿಯ ದೃಷ್ಟಿಯಿಂದ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯೇ ಸಾಕು. ಅಕ್ಟೋಬರ್ 22 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ಮೊದಲು ಭಾರತ ಇನ್ನೂ ಐದು ಪಂದ್ಯಗಳನ್ನು ಆಡಬೇಕಾಗಿದ್ದು, ಈ ಪಂದ್ಯಗಳಲ್ಲಿ, ಏಷ್ಯಾಕಪ್‌ನಲ್ಲಿ ಕಂಡುಬಂದ ಎಲ್ಲಾ ದೌರ್ಬಲ್ಯಗಳನ್ನು ಭಾರತ ನಿವಾರಿಸಿಕೊಳ್ಳಬೇಕಾಗಿದೆ.
ಫೀಲ್ಡಿಂಗ್ನಲ್ಲೂ ಸುಧಾರಣೆಬೇಕು
ವೇಗದ ಬೌಲಿಂಗ್‌ನ ಹೊರತಾಗಿ ಸ್ಪಿನ್‌ನಲ್ಲಿಯೂ ಭಾರತದ ಪ್ರದರ್ಶನ ವಿಶೇಷವಾಗಿರಲಿಲ್ಲ. ತಂಡದ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮೊಹಾಲಿಯಲ್ಲಿ ಉತ್ತಮ ಫಾರ್ಮ್ ತೋರಲಿಲ್ಲ. ಕಳೆದ ಕೆಲವು ಪಂದ್ಯಗಳಲ್ಲಿ ಅವರು ಅತ್ಯಂತ ದುಬಾರಿ ಎಂದು ಸಾಬೀತುಪಡಿಸಿದ್ದಾರೆ. ಸ್ಪಿನ್ನರ್‌ಗಳಿಗೆ ಸಹಾಯಕವಾಗದ ವಿಕೆಟ್‌ಗಳಲ್ಲಿಯೂ ಅವರು ಪ್ರದರ್ಶನ ನೀಡುವ ಮಾರ್ಗವನ್ನು ಕಂಡುಕೊಳ್ಳಬೇಕು. ಬೌಲಿಂಗ್ ಹೊರತಾಗಿ ಭಾರತದ ಫೀಲ್ಡಿಂಗ್ ಕೂಡ ತೀರಾ ಕಳಪೆಯಾಗಿತ್ತು. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿತ್ತು. ಇದಕ್ಕಾಗಿ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ತಂಡವನ್ನು ಟೀಕಿಸಿದ್ದರು. ಆದಾಗ್ಯೂ, ಮೊದಲ ಟಿ20ಯಲ್ಲಿ, ಭಾರತದ ಆಕ್ರಮಣಕಾರಿ ಬ್ಯಾಟಿಂಗ್ ಅತ್ಯುತ್ತಮವಾಗಿ ಸಾಬೀತಾಯಿತು, ಈ ಕಾರಣದಿಂದಾಗಿ ರೋಹಿತ್ ಪಡೆ 208 ರನ್ ಗಳಿಸಲು ಸಾಧ್ಯವಾಯಿತು.
ಆಸ್ಟ್ರೇಲಿಯಕ್ಕೆ ಸರಣಿ ಗೆಲ್ಲುವ ಅವಕಾಶ
ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡ ಪ್ರತಿಯೊಂದು ವಿಭಾಗದಲ್ಲೂ ಉತ್ತಮವಾಗಿ ಕಾಣುತ್ತಿದೆ. ಆದರೆ ಅವರ ತಂಡದಲ್ಲಿ ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಆಟಗಾರರ ಕೊರತೆಯಿದೆ. ಆಸ್ಟ್ರೇಲಿಯಾ ಪರ ಮೊದಲ ಪಂದ್ಯ ಆಡಿದ ಅನುಭವಿ ಸ್ಟೀವನ್ ಸ್ಮಿತ್ ಮತ್ತು ಟಿಮ್ ಡೇವಿಡ್ ತಂಡವನ್ನು ಬಲಿಷ್ಠಗೊಳಿಸಿದರೆ, ವಾರ್ನರ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ತೆರೆಯಲು ಕಳುಹಿಸಲಾದ ಕ್ಯಾಮರೂನ್ ಗ್ರೀನ್ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ಮ್ಯಾಥ್ಯೂ ವೇಡ್ ಫಿನಿಶರ್ ಪಾತ್ರಕ್ಕೆ ತಕ್ಕಂತೆ ಆಡಿದರು. 21 ಎಸೆತಗಳಲ್ಲಿ ಔಟಾಗದೆ 45 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಮೊಹಾಲಿಯಲ್ಲಿ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಗ್ರೀನ್ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದರಿಂದ ಆಸ್ಟ್ರೇಲಿಯಾ ಬೌಲಿಂಗ್‌ನಲ್ಲಿ ಹೆಚ್ಚು ಶಿಸ್ತುಬದ್ಧವಾಗಿರಬೇಕು.
Published On - 8:11 am, Fri, 23 September 22