Babar Azam: ಫಾರ್ಮ್ಗೆ ಬಂದೊಡನೆ ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್ ಅಜಮ್
PAK vs ENG: ಕೇವಲ 66 ಎಸೆತಗಳಲ್ಲಿ 11 ಫೋರ್, 5 ಸಿಕ್ಸರ್ ಸಿಡಿಸಿ ಅಜೇಯ 110 ರನ್ ಚಚ್ಚಿದ ಬಾಬರ್ ಟಿ20 ಕ್ರಿಕೆಟ್ನಲ್ಲಿ 8000 ರನ್ ಪೂರೈಸಿದರು.
ಕರಾಚಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಪಾಕಿಸ್ತಾನ (Pakistan vs England) ಅಮೋಘ ಗೆಲುವು ಕಂಡಿದೆ. 200 ರನ್ಗಳ ಟಾರ್ಗೆಟ್ ಅನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದ ಪಾಕ್ ವಿಶೇಷ ದಾಖಲೆ ಬರೆದಿದೆ. ಸತತ ಕಳಪೆ ಫಾರ್ಮ್ನಿಂದ ತತ್ತರಿಸಿದ್ದ ನಾಯಕ ಬಾಬರ್ ಅಜಮ್ (Babar Azam) ಕೂಡ ಆಕರ್ಷಕ ಶತಕ ಸಿಡಿಸುವ ಮೂಲಕ ಫಾರ್ಮ್ಗೆ ಮರಳಿದ್ದಾರೆ. ಇದರ ಜೊತೆಗೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ. ಕೇವಲ 66 ಎಸೆತಗಳಲ್ಲಿ 11 ಫೋರ್, 5 ಸಿಕ್ಸರ್ ಸಿಡಿಸಿ ಅಜೇಯ 110 ರನ್ ಚಚ್ಚಿದ ಬಾಬರ್ ಟಿ20 ಕ್ರಿಕೆಟ್ನಲ್ಲಿ 8000 ರನ್ ಪೂರೈಸಿದರು.
ಈ ಮೂಲಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಟಿ20 ಮಾದರಿಯ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 8000 ರನ್ ಗಳಿಸಿದ ಎರಡನೇ ಬ್ಯಾಟರ್ ಆಗಿ ಬಾಬರ್ ಹೊರಹೊಮ್ಮಿದ್ದಾರೆ. ಬಾಬರ್ 218 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದರೆ, ಕೊಹ್ಲಿ 243 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಮೊದಲ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ದಿಗ್ಗಜ ಬ್ಯಾಟರ್ ಕ್ರೀಸ್ ಗೇಲ್ ಅವರಿದ್ದು 213 ಇನ್ನಿಂಗ್ಸ್ಗಳಲ್ಲಿ 8000 ರನ್ಗಳ ಗಡಿ ಮುಟ್ಟಿದ್ದರು.
ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಗೆಲುವು ಕಾಣುವ ಮೂಲಕ ಪಾಕಿಸ್ತಾನ ತಂಡದ ಓಪನರ್ಗಳು ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಯಾವುದೇ ಜೋಡಿ ಇಲ್ಲಿಯವರೆಗೆ 200 ರನ್ಗಳ ಜೊತೆಯಾಟವಾಡಿಲ್ಲ. ಆದರೆ, ನಿನ್ನೆಯ ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯದಲ್ಲಿ ಬಾಬರ್–ರಿಜ್ವಾನ್ ಜೋಡಿ ಈ ಸಾಧನೆ ಮಾಡಿದೆ. ಇಬ್ಬರು ಜೊತೆಯಾಗಿ 19.3 ಓವರ್ಗಳಲ್ಲಿ 203 ರನ್ಗಳ ಆಟವಾಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು. ನಾಯಕ ಮೊಯೀನ್ ಅಲಿ 23 ಎಸೆತಗಳಲ್ಲಿ ತಲಾ 4 ಫೋರ್, ಸಿಕ್ಸರ್ ಸಿಡಿಸಿ ಅಜೇಯ 55 ರನ್ ಚಚ್ಚಿದರೆ, ಡಕ್ಲೆಟ್ 43, ಹ್ಯಾರಿ ಬ್ರೂಕ್ಸ್ 31 ರನ್ ಬಾರಿಸಿದರು. ಪಾಕಿಸ್ತಾನ ಪರ ದಹಾನಿ ಹಾಗೂ ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಪರ ಓಪನರ್ಗಳಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರರು. ಇಬ್ಬರು ಜೊತೆಯಾಗಿ 19.3 ಓವರ್ಗಳಲ್ಲಿ 203 ರನ್ಗಳ ಆಟವಾಡಿ ಗೆಲುವು ತಂದುಕೊಟ್ಟರು. ಬಾಬರ್ ಅಜೇಯ 110 ರನ್ ಹಾಗೂ ರಿಜ್ವಾನ್ ಅಜೇಯ 88 ರನ್ ಗಳಿಸಿದರು. ಇದೀಗ ಏಳು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದ ಸಮಬಲ ಸಾಧಿಸಿದೆ.
Published On - 10:00 am, Fri, 23 September 22