6 ಎಸೆತಗಳಲ್ಲಿ 30 ರನ್ ಚಚ್ಚಿದ ಕ್ರಿಕೆಟ್ ದೇವರು..! ಅಬ್ಬರಿಸಿದ ಯುವಿ- ಯೂಸುಫ್; ವಿಡಿಯೋ
Road Safety World Series 2022: ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನ 14ನೇ ಪಂದ್ಯದಲ್ಲಿ ಸಚಿನ್ ಕೇವಲ 20 ಎಸೆತಗಳಲ್ಲಿ 40 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಬಿರುಸಿನ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 6 ಎಸೆತಗಳಲ್ಲಿ 30 ರನ್ ಚಚ್ಚಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕ್ರಿಕೆಟ್ ದೇವರು ವಿದಾಯ ಹೇಳಿರಬಹುದು. ಆದರೆ ಸಿಡಿಲಮರಿ ಸಚಿನ್ (Sachin Tendulkar) ಅವರ ಹಳೆಯ ಬ್ಯಾಟಿಂಗ್ ಶೈಲಿ ಮಾತ್ರ ಇನ್ನು ಮಾಸಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನ (Road Safety World Series) 14ನೇ ಪಂದ್ಯದಲ್ಲಿ ಸಚಿನ್ ಕೇವಲ 20 ಎಸೆತಗಳಲ್ಲಿ 40 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಬಿರುಸಿನ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 6 ಎಸೆತಗಳಲ್ಲಿ 30 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಸವ್ಯಸಾಚಿ, 3 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಹ ಬಾರಿಸಿದರು. ತೆಂಡೂಲ್ಕರ್ ಹೊರತಾಗಿ ಯುವರಾಜ್ ಸಿಂಗ್ ಮತ್ತು ಯೂಸುಫ್ ಪಠಾಣ್ ಕೂಡ ಬ್ಯಾಟ್‌ನಿಂದ ಅಬ್ಬರ ಸೃಷ್ಟಿಸಿ ರನ್‌ಗಳ ಸುರಿಮಳೆಗೈದರು. ಪವರ್‌ಪ್ಲೇನಲ್ಲಿಯೇ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದ ಸಚಿನ್ ತೆಂಡೂಲ್ಕರ್, 200 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಚಿನ್, ಯುವಿ ಮತ್ತು ಯೂಸುಫ್ ಅಬ್ಬರ
ಡೆಹ್ರಾಡೂನ್‌ನಲ್ಲಿ ನಡೆದ ಮಳೆ ಪೀಡಿತ ಪಂದ್ಯ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್, ಮೊದಲು ಬ್ಯಾಟಿಂಗ್ ಮಾಡಿ 15 ಓವರ್‌ಗಳಲ್ಲಿ 5 ವಿಕೆಟ್‌ಗೆ 170 ರನ್ ಗಳಿಸಿತು. ಸಚಿನ್, ಯುವರಾಜ್ ಮತ್ತು ಯೂಸುಫ್ ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಇದಕ್ಕೆ ಉತ್ತರವಾಗಿ ಇಯಾನ್ ಬೆಲ್ ತಂಡ ಇಂಗ್ಲೆಂಡ್ ಲೆಜೆಂಡ್ಸ್ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 130 ರನ್ ಗಳಿಸಲಷ್ಟೇ ಶಕ್ತವಾಗಿ 40 ರನ್‌ಗಳಿಂದ ಸೋಲನುಭವಿಸಿತು. ಸಚಿನ್ ಹೊರತಾಗಿ, ಯೂಸುಫ್ 11 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 27 ರನ್ ಗಳಿಸಿದರು.
Vintage Sachin Tendulkar pic.twitter.com/qvogWLkVqC
— Sachin Tendulkar??FC (@CrickeTendulkar) September 22, 2022
12 ರನ್ ನೀಡಿ 3 ವಿಕೆಟ್ ಪಡೆದ ಪವಾರ್
ತೆಂಡೂಲ್ಕರ್ ಮತ್ತು ಯೂಸುಫ್ ಹೊರತುಪಡಿಸಿ ಆಲ್ ರೌಂಡರ್ ಯುವರಾಜ್ ಸಿಂಗ್ 15 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ಯುವಿ ಅವರ ಬಿರುಸಿನ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಹ ಸೇರಿದ್ದವು. ಇದಲ್ಲದೇ ಆರಂಭಿಕರಾದ ನಮನ್ ಓಜಾ 17 ಎಸೆತಗಳಲ್ಲಿ 20 ರನ್, ಸುರೇಶ್ ರೈನಾ 12 ಮತ್ತು ಸ್ಟುವರ್ಟ್ ಬಿನ್ನಿ 18 ರನ್ ಗಳಿಸಿದರು. ಇರ್ಫಾನ್ ಪಠಾಣ್ 11 ರನ್ ಗಳಿಸಿ ಅಜೇಯರಾಗಿ ಉಳಿದರು.
That's it from Match 14! A brilliant allround show from the @India__Legends brings them their 2nd win of the season as they reach the top of the table!#INDLvsENGL #RoadSafetyWorldSeries #RSWS #YehJungHaiLegendary pic.twitter.com/NrLzNITbmb
— Road Safety World Series (@RSWorldSeries) September 22, 2022
ಆಂಗ್ಲ ಬೌಲರ್ ಸ್ಟೀಫನ್ ಪ್ಯಾರಿ 3 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಆಂಗ್ಲರ ಪರ ಫಿಲ್ ಮಸ್ಟರ್ಡ್ ತಂಡದ ಪರ ಗರಿಷ್ಠ 29 ರನ್ ಗಳಿಸಿದರು. ಇಂಡಿಯಾ ಲೆಜೆಂಡ್ ಪರ ರಾಜೇಶ್ ಪವಾರ್ ಮಾರಕ ಬೌಲಿಂಗ್ ಮಾಡಿ, 12 ರನ್ ನೀಡಿ 3 ವಿಕೆಟ್ ಪಡೆದರು. ಸ್ಟುವರ್ಟ್ ಬಿನ್ನಿ, ಪ್ರಗ್ಯಾನ್ ಓಜಾ ಮತ್ತು ಮನ್‌ಪ್ರೀತ್ ಗೋನಿ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
Published On - 3:30 pm, Fri, 23 September 22