
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 10 ದಿನಗಳ ವಿರಾಮದ ನಂತರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದೆ. ಪರ್ತ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ರೋಹಿತ್ ಪಡೆಯ ಕಣ್ಣುಗಳು ಈ ಮುನ್ನಡೆಯನ್ನು ಹೆಚ್ಚಿಸುವುದರ ಮೇಲಿರಲಿದೆ. ಆದರೆ ಅಡಿಲೇಡ್‌ನಲ್ಲಿ ಕಳೆದ ಬಾರಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 36 ರನ್ಗಳಿಗೆ ಆಲೌಟ್ ಆಗಿ ಭಾರಿ ಮುಜುಗರಕ್ಕೆ ಒಳಗಾಗಿತ್ತು. ಹೀಗಾಗಿ ಟೀಂ ಇಂಡಿಯಾ ಹಿಂದಿನ ಕಹಿ ಘಟನೆಯನ್ನು ಮರೆತು ಅಖಾಡಕ್ಕಿಳಿಯಬೇಕಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡುವ ಆತಂಕ ಎದುರಾಗಿದೆ.
ಅಡಿಲೇಡ್ ಪಿಚ್ ಬಗ್ಗೆ ಹೇಳಿಕೆ ನೀಡಿರುವ ಪಿಚ್ ಕ್ಯುರೇಟರ್ ಡೇಮಿಯನ್ ಹಗ್,‘ಪಿಚ್‌ನಲ್ಲಿ ಆರು ಎಂಎಂ ಹುಲ್ಲು ಇರಲಿದ್ದು, ಇದು ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಚೆಂಡು ಸ್ವಿಂಗ್ ಮತ್ತು ಸೀಮ್ ಆಗುತ್ತದೆ. ಆದಾಗ್ಯೂ, ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗೆ ಸಮಾನ ಲಾಭ ಸಿಗುವಂತೆ ಸಮತೋಲನದ ವಿಕೆಟ್ ಮಾಡಿರುವುದಾಗಿ ಕ್ಯುರೇಟರ್ ಹೇಳಿದ್ದಾರೆ.
ಹವಾಮಾನ ವರದಿಯ ಪ್ರಕಾರ, ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲ ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಡಿಸೆಂಬರ್ 6 ರಂದು ಶೇ.88 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆಕ್ಟುವೆದರ್ ಹೊರತಾಗಿ, ಪಿಚ್ ಕ್ಯುರೇಟರ್ ಕೂಡ ಚಂಡಮಾರುತದಿಂದಾಗಿ ಮೊದಲ ದಿನದ ಆಟಕ್ಕೆ ಅಡ್ಡಿಯಾಗಬಹುದು ಎಂದು ಹೇಳಿದ್ದಾರೆ. ರಾತ್ರಿ ವೇಳೆ ಮೋಡ ಕವಿದ ವಾತಾವರಣವಿದ್ದರೆ ಇಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ. ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಆದರೆ ಎರಡನೇ ದಿನದಿಂದ ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ವರದಿಯಾಗಿದೆ.
ಅಡಿಲೇಡ್‌ನಲ್ಲಿ ಭಾರತ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8 ಟೆಸ್ಟ್ ಪಂದ್ಯಗಳಲ್ಲಿ ಸೋತಿದ್ದು ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ 3 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. ಆಸ್ಟ್ರೇಲಿಯಾ ಅಡಿಲೇಡ್‌ನಲ್ಲಿ ಒಟ್ಟು 82 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 45ರಲ್ಲಿ ಗೆದ್ದಿದ್ದರೆ, 18ರಲ್ಲಿ ಸೋತಿದೆ ಮತ್ತು 19 ಪಂದ್ಯಗಳು ಡ್ರಾ ಆಗಿವೆ.
ಅಡಿಲೇಡ್‌ನಲ್ಲಿ ಇದುವರೆಗೆ 82 ಪಂದ್ಯಗಳು ನಡೆದಿವೆ. 82ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 40 ಬಾರಿ ಗೆದ್ದರೆ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ 23 ಬಾರಿ ಗೆದ್ದಿದೆ. 19 ಪಂದ್ಯಗಳು ಡ್ರಾ ಆಗಿವೆ. ಇಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 379, ಎರಡನೇ ಇನಿಂಗ್ಸ್ 346, ಮೂರನೇ ಇನ್ನಿಂಗ್ಸ್ 268 ಮತ್ತು ಕೊನೆಯ ಇನಿಂಗ್ಸ್‌ನ ಸರಾಸರಿ ಸ್ಕೋರ್ 208 ರನ್ ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ