AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VHT ಟೂರ್ನಿಯಲ್ಲಿ ಕಣಕ್ಕಿಳಿದ ವಿರಾಟ್, ರೋಹಿತ್​ಗೆ ಸಿಗುವ ವೇತನ ಎಷ್ಟು ಗೊತ್ತಾ?

Virat Kohli - Rohit Sharma: ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದರೆ ಸಿಗುವ ಸಂಭಾವನೆ ಬರೋಬ್ಬರಿ 6 ಲಕ್ಷ ರೂ. ಹಾಗೆಯೇ ಟೆಸ್ಟ್ ಮ್ಯಾಚ್​ ಆಡಿದಾಗ ಪ್ರತಿ ಪಂದ್ಯಕ್ಕೆ 15 ಲಕ್ಷ ರೂ. ಪಡೆಯುತ್ತಿದ್ದರು. ಇನ್ನು ಟಿ20 ಪಂದ್ಯವೊಂದರಲ್ಲಿ ಕಣಕ್ಕಿಳಿದಾಗ ಪಡೆಯುತ್ತಿದ್ದ ಸಂಭಾವನೆ 3 ಲಕ್ಷ ರೂ. ಇದೀಗ ಈ ಇಬ್ಬರು ದಿಗ್ಗಜರು ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಇಲ್ಲಿ ಪ್ರತಿ ಪಂದ್ಯಕ್ಕೆ ಸಿಗುವ ವೇತನ ಎಷ್ಟು ಎಂಬುದರ ಮಾಹಿತಿ ಈ ಕೆಳಗೆ ನೀಡಲಾಗಿದೆ.

VHT ಟೂರ್ನಿಯಲ್ಲಿ ಕಣಕ್ಕಿಳಿದ ವಿರಾಟ್, ರೋಹಿತ್​ಗೆ ಸಿಗುವ ವೇತನ ಎಷ್ಟು ಗೊತ್ತಾ?
Rohit Sharma - Virat Kohli
ಝಾಹಿರ್ ಯೂಸುಫ್
|

Updated on: Dec 25, 2025 | 9:34 AM

Share

ಬರೋಬ್ಬರಿ 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಅತ್ತ 7 ವರ್ಷಗಳ ನಂತರ ರೋಹಿತ್ ಶರ್ಮಾ ಕೂಡ ದೇಶೀಯ ಅಂಗಳದಲ್ಲಿ ಏಕದಿನ ಪಂದ್ಯವಾಡಿದ್ದಾರೆ. ಇವರೊಂದಿಗೆ ರಿಷಭ್ ಪಂತ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್ ಕೂಡ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಆಟಗಾರರು ಪ್ರತಿ ಪಂದ್ಯಕ್ಕೆ ವೇತನವನ್ನು ಸಹ ಪಡೆಯಲಿದ್ದಾರೆ.

ಅಂದರೆ ವಿಜಯ ಹಝಾರೆ ಟೂರ್ನಿಯಲ್ಲಿ ಪ್ರತಿ ಮ್ಯಾಚ್​ಗಳಿಗೆ ಇಂತಿಷ್ಟು ಸಂಭಾವನೆ ನಿಗದಿ ಮಾಡಲಾಗಿದೆ. ಅತ್ತ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಲಕ್ಷಗಳ ರೂ.ನಲ್ಲಿ ವೇತನ ಪಡೆಯುವ ಸ್ಟಾರ್ ಆಟಗಾರರು ದೇಶೀಯ ಅಂಗಳದಲ್ಲಿ ಸಾವಿರಗಳ ರೂಪದಲ್ಲಿ ಸಂಭಾವನೆ ಪಡೆಯಲಿದ್ದಾರೆ.

ವೇತನ ಎಷ್ಟು?

ವಿಜಯ ಹಝಾರೆ ಟೂರ್ನಿಯಲ್ಲಿ ಮೂರು ವಿಭಾಗಗಳಾಗಿ ವೇತನ ನೀಡಲಾಗುತ್ತದೆ. ಅಂದರೆ ಇಲ್ಲಿ ಅನುಭವಿ ಆಟಗಾರರಿಗೆ ಹೆಚ್ಚಿನ ವೇತನ, ಉಳಿದವರಿಗೆ ಕಡಿಮೆ ವೇತನ ನಿಗದಿ ಮಾಡಲಾಗಿದೆ.

  • 1 ರಿಂದ 20 ಪಂದ್ಯಗಳನ್ನಾಡಿದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 40 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.
  • 21 ರಿಂದ 40 ಮ್ಯಾಚ್​ಗಳನ್ನಾಡಿರುವ ಆಟಗಾರರು ಪ್ರತಿ ಪಂದ್ಯಕ್ಕೆ 50 ಸಾವಿರ ರೂ. ವೇತನ ಪಡೆಯಲಿದ್ದಾರೆ.
  • 41 ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿರುವ ಆಟಗಾರರಿಗೆ ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಸಿಗಲಿದೆ.

ಇದನ್ನೂ ಓದಿ: ಕರ್ನಾಟಕ ತಂಡದ ವಿಶ್ವ ದಾಖಲೆಯ ಚೇಸಿಂಗ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವೇತನ ಎಷ್ಟು?

ವಿಜಯ ಹಝಾರೆ ಟೂರ್ನಿಯು ಲಿಸ್ಟ್ ಎ ಕ್ರಿಕೆಟ್ ಟೂರ್ನಿ. ಹೀಗಾಗಿ ಲಿಸ್ಟ್ ಎ ಪಂದ್ಯಗಳ ಅನುಭವವನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ 41 ಕ್ಕಿಂತ ಹೆಚ್ಚಿನ ಏಕದಿನ ಪಂದ್ಯಗಳನ್ನಾಡಿರುವ ಆಟಗಾರರು ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.

  • ವಿರಾಟ್ ಕೊಹ್ಲಿ ಲಿಸ್ಟ್​ ಎ ಕ್ರಿಕೆಟ್​ನಲ್ಲಿ 343 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಅವರು ವಿಜಯ ಹಝಾರೆ ಟೂರ್ನಿಯ ಒಂದು ಪಂದ್ಯಕ್ಕೆ 60 ಸಾವಿರ ರೂ, ವೇತನ ಪಡೆಯಲಿದ್ದಾರೆ.
  • ರೋಹಿತ್ ಶರ್ಮಾ ಲಿಸ್ಟ್ ಎ ಕ್ರಿಕೆಟ್​ನಲ್ಲಿ 351 ಮ್ಯಾಚ್​ಗಳನ್ನಾಡಿರುವ ಕಾರಣ ಅವರಿಗೂ ವಿಜಯ ಹಝಾರೆ ಟೂರ್ನಿಯ ಪ್ರತಿ ಪಂದ್ಯಕ್ಕೆ 60 ಸಾವಿರ ರೂ. ನೀಡಲಾಗುತ್ತದೆ.
  • ಕೆಎಲ್ ರಾಹುಲ್ ಲಿಸ್ಟ್ ಎ ಕ್ರಿಕೆಟ್​ನಲ್ಲಿ 143 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಅವರು ಸಹ ಒಂದು ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.
  • ಶುಭ್​ಮನ್ ಗಿಲ್ ಈವರೆಗೆ 69 ಲಿಸ್ಟ್ ಎ ಕ್ರಿಕೆಟ್​ನಲ್ಲಿ 69 ಪಂದ್ಯಗಳನ್ನಾಡಿದ್ದು, ಅದರಂತೆ ಪ್ರತಿ ಪಂದ್ಯಕ್ಕೆ 60 ಸಾವಿರ ರೂ. ವೇತನ ಗಿಟ್ಟಿಸಿಕೊಳ್ಳಲಿದ್ದಾರೆ.
  • ರಿಷಭ್ ಪಂತ್ 68 ಲಿಸ್ಟ್ ಎ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಅವರು ಸಹ ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.