AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ತಂಡದ ವಿಶ್ವ ದಾಖಲೆಯ ಚೇಸಿಂಗ್

Vijay Hazare Trophy 2025: ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಕರ್ನಾಟಕ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ದಾಖಲೆಯ ಮೊತ್ತ ಚೇಸ್ ಮಾಡುವ ಮೂಲಕ. ಅಂದರೆ ಲಿಸ್ಟ್ ಎ ಕ್ರಿಕೆಟ್​ನಲ್ಲಿ 400+ ರನ್​ಗಳನ್ನು ಚೇಸ್ ಮಾಡಿ ವಿಶ್ವ ದಾಖಲೆ ಬರೆಯುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿದೆ.

ಕರ್ನಾಟಕ ತಂಡದ ವಿಶ್ವ ದಾಖಲೆಯ ಚೇಸಿಂಗ್
Devdutt - Mayank
ಝಾಹಿರ್ ಯೂಸುಫ್
|

Updated on: Dec 25, 2025 | 7:54 AM

Share

ಏಕದಿನ ಪಂದ್ಯದಲ್ಲಿ 400 ಕ್ಕಿಂತಲೂ ಅಧಿಕ ರನ್​ಗಳನ್ನು ಚೇಸ್ ಮಾಡಿ ಗೆದ್ದಿರುವುದು ಕೇವಲ 2 ತಂಡಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ತಂಡ ಸೌತ್ ಆಫ್ರಿಕಾ. ಇನ್ನು ಎರಡನೇ ತಂಡ ಕರ್ನಾಟಕ. ಪ್ರಸ್ತುತ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಬೃಹತ್ ಮೊತ್ತ ಬೆನ್ನತ್ತಿ ಕರ್ನಾಟಕ ತಂಡ ಹೊಸ ಇತಿಹಾಸ ನಿರ್ಮಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ಶಿಖರ್ ಮೋಹನ್ 44 ರನ್ ಬಾರಿಸಿದರೆ, ವಿರಾಟ್ ಸಿಂಗ್ 88 ರನ್ ಕಲೆಹಾಕಿದ್ದರು.

ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಇಶಾನ್ ಕಿಶನ್ ಕರ್ನಾಟಕ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 33 ಎಸೆತಗಳಲ್ಲಿ ಶತಕ ಮೂಡಿಬಂತು. ಅಷ್ಟೇ ಅಲ್ಲದೆ 39 ಎಸೆತಗಳನ್ನು ಎದುರಿಸಿದ ಇಶಾನ್ 14 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 125 ರನ್ ಬಾರಿಸಿದರು.

ಇಶಾನ್ ಕಿಶನ್ ಅವರ ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಜಾರ್ಖಂಡ್ ತಂಡವು 50 ಓವರ್​​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 412 ರನ್​ ಕಲೆಹಾಕಿತು.

ವಿಶ್ವ ದಾಖಲೆಯ ಚೇಸಿಂಗ್:

413 ರನ್​ಗಳ ಕಠಿಣ ಗುರಿ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 114 ರನ್ ಪೇರಿಸಿ ಮಯಾಂಕ್ ಅಗರ್ವಾಲ್ (54) ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಕರುಣ್ ನಾಯರ್ 29 ರನ್​ಗಳ ಕೊಡುಗೆ ನೀಡಿದರು. ಇನ್ನು ಸ್ಮರಣ್ ರವಿಚಂದ್ರನ್ 27 ರನ್​ಗಳಿಸಿದರು. ಇದಾಗ್ಯೂ ಮತ್ತೊಂದೆಡೆ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ್ದರು.

ಇನ್ನು ಕೃಷ್ಣನ್ ಶ್ರೀಜಿತ್ (38) ಜೊತೆಗೂಡಿ ಪಡಿಕ್ಕಲ್ ತಂಡದ ಮೊತ್ತವನ್ನು 250 ರನ್​​ಗಳ ಗಡಿದಾಟಿದರು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ತಮ್ಮ ಭರ್ಜರಿ ಶತಕವನ್ನೂ ಸಹ ಪೂರೈಸಿದರು.

ಶ್ರೀಜಿತ್ ಔಟಾದ ಬೆನ್ನಲ್ಲೇ ಆಗಮಿಸಿದ ಅಭಿನವ್ ಮನೋಹರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 40 ಓವರ್​ ಆಗುವಷ್ಟರಲ್ಲಿ ಕರ್ನಾಟಕ ತಂಡದ ಸ್ಕೋರ್ 300 ರ ಗಡಿದಾಟಿತು.

ಆದರೆ ಕರ್ನಾಟಕ ತಂಡವು 325 ರನ್​ಗಳಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾಗಿ ದೇವದತ್ ಪಡಿಕ್ಕಲ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ 118 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 147 ರನ್​ ಬಾರಿಸಿದ್ದ ಪಡಿಕ್ಕಲ್ ಇನಿಂಗ್ಸ್ ಅಂತ್ಯವಾಯಿತು.

ಈ ಹಂತದಲ್ಲಿ ಜೊತೆಗೂಡಿದ ಅಭಿನವ್ ಮನೋಹರ್ (56) ಹಾಗೂ ಧ್ರುವ್ ಪ್ರಭಾಕರ್ (40) ಬಿರುಸಿನ ಬ್ಯಾಟಿಂಗ್​ನೊಂದಿಗೆ 47.3 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಕರ್ನಾಟಕ ತಂಡವು 15 ಎಸೆತಗಳು ಬಾಕಿಯಿರುವಂತೆ 413 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಇದರೊಂದಿಗೆ ಲಿಸ್ಟ್ ಎ (ಏಕದಿನ ಕ್ರಿಕೆಟ್​) ಪಂದ್ಯದಲ್ಲಿ 400+ ರನ್​ ಚೇಸ್ ಮಾಡಿದ ವಿಶ್ವದ ಎರಡನೇ ತಂಡವೆಂಬ ವಿಶ್ವ ದಾಖಲೆಯನ್ನು ಕರ್ನಾಟಕ ತಂಡ ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲದೆ ವಿಜಯ ಹಝಾರೆ ಟೂರ್ನಿಯಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದ ಹೆಗ್ಗಳಿಕೆಗೂ ಪಾತ್ರವಾಯಿತು.

ಇದಕ್ಕೂ ಮುನ್ನ ವಿಜಯ ಹಝಾರೆ ಟೂರ್ನಿಯಲ್ಲಿ 384 ರನ್​ಗಳನ್ನು ಬೆನ್ನತ್ತಿರುವುದು ಸರ್ವಶ್ರೇಷ್ಠ ದಾಖಲೆಯಾಗಿತ್ತು. 2011 ರಲ್ಲಿ ಗೋವಾ ನೀಡಿದ 384 ರನ್​ಗಳನ್ನು ಗುರಿಯನ್ನು ಆಂಧ್ರ ಪ್ರದೇಶ್ ತಂಡ ಚೇಸ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದರು.  ಇದೀಗ 413 ರನ್​ಗಳ ಚೇಸಿಂಗ್​ನೊಂದಿಗೆ ಕರ್ನಾಟಕ ತಂಡ ಹೊಸ ದಾಖಲೆ ನಿರ್ಮಿಸಿದೆ.

ಕರ್ನಾಟಕ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಧ್ರುವ್ ಪ್ರಭಾಕರ್, ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಅಭಿಲಾಷ್ ಶೆಟ್ಟಿ.

ಇದನ್ನೂ ಓದಿ: ವೈಭವ್ ಆರ್ಭಟಕ್ಕೆ ದಾಖಲೆಗಳೇ ಧೂಳೀಪಟ..!

ಜಾರ್ಖಂಡ್ (ಪ್ಲೇಯಿಂಗ್ XI): ಇಶಾನ್ ಕಿಶನ್ (ನಾಯಕ), ಕುಮಾರ್ ಕುಶಾಗ್ರಾ, ಶಿಖರ್ ಮೋಹನ್, ಉತ್ಕರ್ಷ್ ಸಿಂಗ್, ವಿರಾಟ್ ಸಿಂಗ್, ರಾಬಿನ್ ಮಿಂಝ್, ಅನುಕುಲ್ ರಾಯ್, ಶುಭ್ ಶರ್ಮಾ, ಸೌರಭ್ ಶೇಖರ್, ಸುಶಾಂತ್ ಮಿಶ್ರಾ, ವಿಕಾಶ್ ಸಿಂಗ್.