ಹೈಬ್ರಿಡ್ ಮಾದರಿಯ ಜೊತೆಗೆ ತ್ರಿಕೋನ ಸರಣಿ; ಪಾಕ್ ಮಂಡಳಿಯ ಹೊಸ ಷರತ್ತು
Champions Trophy 2025: ಬಿಸಿಸಿಐ, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕೆಲವು ಷರತ್ತುಗಳೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ. ಆದಾಗ್ಯೂ, ಪಿಸಿಬಿಯ ಎಲ್ಲಾ ಷರತ್ತುಗಳನ್ನು ಐಸಿಸಿ ತಿರಸ್ಕರಿಸಿದೆ ಎಂದು ಕೆಲವು ವರದಿಗಳು ಹೇಳಿವೆ.

ಜಯ್ ಶಾ ಐಸಿಸಿ ಅಧ್ಯಕ್ಷರಾದ ಬಳಿಕವಾದರೂ ಚಾಂಪಿಯನ್ಸ್ ಟ್ರೋಫಿ ಆಯೋಜಕತ್ವಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅದು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಜಯ್ ಶಾಗೆ ಇದುವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಐಸಿಸಿ ತನ್ನ ಸಭೆಯನ್ನು ಡಿಸೆಂಬರ್ 5 ರಿಂದ ಡಿಸೆಂಬರ್ 7 ಕ್ಕೆ ಮುಂದೂಡಿದೆ. ಒಂದೆಡೆ ಬಿಸಿಸಿಐ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕೆಲವು ಷರತ್ತುಗಳೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದೆ. ಆದಾಗ್ಯೂ, ಪಿಸಿಬಿಯ ಎಲ್ಲಾ ಷರತ್ತುಗಳನ್ನು ಐಸಿಸಿ ತಿರಸ್ಕರಿಸಿದೆ ಎಂದು ಕೆಲವು ವರದಿಗಳು ಹೇಳಿವೆ.
ತ್ರಿಕೋನ ಸರಣಿಗೆ ಪಿಸಿಬಿ ಬೇಡಿಕೆ
ವರದಿಗಳ ಪ್ರಕಾರ, 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಗೆ ಸೂಚಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನಾಲ್ಕೈದು ಷರತ್ತುಗಳನ್ನು ಐಸಿಸಿ ಮುಂದಿಟ್ಟಿದೆ ಎಂದು ಹೇಳಲಾಗುತ್ತಿದೆ. ಆ ಪ್ರಕಾರ, ಐಸಿಸಿ ಈವೆಂಟ್‌ಗಳನ್ನು ಆಯೋಜಿಸುವಾಗ ಭಾರತ ಮತ್ತು ಬಿಸಿಸಿಐಗೂ ಇದೇ ರೀತಿಯ ಸೂತ್ರ ಅಳವಡಿಸಬೇಕು ಎಂಬುದು ಪಾಕಿಸ್ತಾನದ ಮೊದಲ ಷರತ್ತಾಗಿದೆ. ಅಂದರೆ ಭಾರತದಲ್ಲಿ ನಡೆಯುವ ಐಸಿಸಿ ಪಂದ್ಯಾವಳಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡಬೇಕು ಎಂಬುದು ಪಿಸಿಬಿಯ ಮೊದಲ ಷರತ್ತು. ಆದರೆ ಇದನ್ನು ಒಪ್ಪಿಕೊಳ್ಳಲು ಐಸಿಸಿ ನಿರಾಕರಿಸಿದೆ. ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಬಾರದು. ಆದ್ದರಿಂದ ಪಾಕಿಸ್ತಾನವು ತನ್ನ ಎಲ್ಲಾ ಪಂದ್ಯಗಳನ್ನು ತವರಿನಲ್ಲಿ ಆಡಲು ಸಾಧ್ಯವಾಗುತ್ತದೆ ಎಂಬುದು ಪಿಸಿಬಿಯ ಎರಡನೇ ಷರತ್ತಾಗಿದೆ. ಆದರೆ ಇದನ್ನು ಸಹ ಐಸಿಸಿ ಒಪ್ಪಿಲ್ಲ ಎಂದು ವರದಿಯಾಗಿದೆ.
ಮೂರನೇ ಷರತ್ತಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೈಬ್ರಿಡ್ ಮಾದರಿಗೆ ಬದಲಾಗಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದೆ. ಇದನ್ನು ಸಹ ಐಸಿಸಿ ತಿರಸ್ಕರಿಸಬಹುದು ಎಂದು ಹೇಳಲಾಗುತ್ತದೆ. ಇದಲ್ಲದೇ ಭಾರತ-ಪಾಕಿಸ್ತಾನ ತಂಡಗಳು ತ್ರಿಕೋನ ಸರಣಿಯನ್ನು ತಟಸ್ಥ ಸ್ಥಳದಲ್ಲಿ ಆಡಬೇಕು ಎಂಬುದು ಪಿಸಿಬಿಯ ದೊಡ್ಡ ಷರತ್ತಾಗಿದೆ. ಆದರೆ ಐಸಿಸಿ ಮತ್ತು ಬಿಸಿಸಿಐ ಈ ವಿಚಾರಕ್ಕೆ ವಿರುದ್ಧವಾಗಿದ್ದು, ಈ ಷರತ್ತನ್ನು ಸಹ ತಿರಸ್ಕರಿಸುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಬಿಸಿಸಿಐ ಜೊತೆಗಿನ ಎಲ್ಲಾ ಕ್ರಿಕೆಟ್ ಮಂಡಳಿಗಳು
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ ಆಯೋಜಕತ್ವಕ್ಕೆ ಸಂಬಂಧಿಸಿದಂತೆ ಏಕಾಂಗಿಯಾಗಿ ನಿಂತಿದೆ. ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಎಲ್ಲಾ ಕ್ರಿಕೆಟ್ ಮಂಡಳಿಗಳು ಭಾರತದ ಜೊತೆಯಲ್ಲಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಡಲು ಸಿದ್ಧವಾಗಿವೆ. ಆದರೆ ಪಾಕಿಸ್ತಾನ ಇನ್ನೂ ತನ್ನ ನಿಲುವಿಗೆ ಗಂಟುಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ಸಭೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿಲುವನ್ನು ಸಡಿಲಿಸದಿದ್ದರೆ ಭಾರೀ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 pm, Thu, 5 December 24
