India vs Australia 4th Test: ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಶುರುವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಗೆಲ್ಲಲು ಉಭಯ ತಂಡಗಳು ಪಣತೊಟ್ಟಿದೆ. ಹೀಗಾಗಿಯೇ 4ನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಈಗಾಗಲೇ 4 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇತ್ತ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು 2-2 ಅಂತರದಿಂದ ಅಂತ್ಯಗೊಳಿಸಲು ಆಸ್ಟ್ರೇಲಿಯಾ ತಂಡ ಕೂಡ ಪ್ಲ್ಯಾನ್ ರೂಪಿಸಿದೆ.
ಮತ್ತೊಂದೆಡೆ ಟೀಮ್ ಇಂಡಿಯಾ ಪಾಲಿಗೆ ಈ ಗೆಲುವು ಅನಿವಾರ್ಯ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶವನ್ನು ಈ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ. ಒಂದು ವೇಳೆ ಭಾರತ ತಂಡವು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋತರೆ ಅತ್ತ ಶ್ರೀಲಂಕಾ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಅವಕಾಶ ಹೆಚ್ಚಾಗಲಿದೆ.
ಹೀಗಾಗಿ ಅಹಮದಾಬಾದ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಇದಲ್ಲದೆ ಈ ಒಂದು ಗೆಲುವಿನೊಂದಿಗೆ ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲೂ ನಂಬರ್ 1 ಸ್ಥಾನಕ್ಕೇರಲಿದೆ. ಅದು ಕೂಡ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕುವ ಮೂಲಕ ಎಂಬುದೇ ಇಲ್ಲಿ ವಿಶೇಷ.
ಇನ್ನು 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಅಥವಾ ಡ್ರಾ ಮಾಡಿಕೊಳ್ಳುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳಬಹುದು. ಈ ಮೂಲಕ ಸತತವಾಗಿ 4 ಬಾರಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಹಿರಿಮೆಗೂ ಪಾತ್ರವಾಗಲಿದೆ. ಈ ಎಲ್ಲಾ ಕಾರಣಗಳಿಂದ ಅಹಮದಾಬಾದ್ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಹತ್ವದೆನಿಸಿಕೊಂಡಿದೆ.
ಒಂದು ವೇಳೆ 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದರೆ ಸರಣಿಯು 2-2 ಅಂತರದಿಂದ ಕೊನೆಗೊಳ್ಳಲಿದೆ. ಇದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಶ್ರೀಲಂಕಾ ತಂಡದ ಕನಸು ಕೂಡ ಜೀವಂತವಾಗಿರಲಿದೆ. ಇಲ್ಲಿ
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಸೋತರೆ, ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಸರಣಿ ಗೆಲ್ಲುವುದನ್ನು ಎದುರು ನೋಡಬೇಕು. ಅಂದರೆ ಇಲ್ಲಿ ಶ್ರೀಲಂಕಾ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ ಕನಸು ಟೀಮ್ ಇಂಡಿಯಾದ ಫಲಿತಾಂಶದ ಮೇಲೆ ಅವಲಂಭಿತವಾಗಿದೆ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಭಾರತ-ಆಸ್ಟ್ರೇಲಿಯಾ ನಡುವಣ ಕೊನೆಯ ಟೆಸ್ಟ್ ಪಂದ್ಯ ಡ್ರಾ ಆದರೆ?
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಡ್ರಾ ಆದರೂ ಟೀಮ್ ಇಂಡಿಯಾದ ಪಾಲಿಗೆ ಮುಳುವಾಗಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದರೂ, ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡದ ಗೆಲುವಿನ ಮೇಲೆ ಫೈನಲ್ ಕನಸು ಆಧಾರಿತವಾಗಿರಲಿದೆ.
ಅಂದರೆ ಇಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಂಡರೆ ಅಥವಾ 2-1 ಅಂತರದಿಂದ ಗೆದ್ದುಕೊಂಡರೆ, ಟೀಮ್ ಇಂಡಿಯಾಗೆ ನೇರವಾಗಿ ಫೈನಲ್ಗೇರಲು ಸಾಧ್ಯವಾಗುವುದಿಲ್ಲ. ಬದಲಾಗಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾವನ್ನು 2-0, 1-0 ಅಂತರದಿಂದ ಸೋಲಿಸಿದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಎಂಟ್ರಿ ಕೊಡಬಹುದು.
ಇತ್ತ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತು, ಅತ್ತ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿ ಗೆದ್ದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಿಂದ ಹೊರಬೀಳಲಿದೆ. ಹೀಗಾಗಿಯೇ ಅಹಮದಾಬಾದ್ ಟೆಸ್ಟ್ ಒಂದಾರ್ಥದಲ್ಲಿ ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.