IND vs AUS: ಆಸೀಸ್ ವಿರುದ್ಧ 4ನೇ ಟಿ20 ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ ಭಾರತ

India Dominates Australia: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 48 ರನ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ಸೂರ್ಯಕುಮಾರ್ ನೇತೃತ್ವದ ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದ ಮುನ್ನಡೆ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 167 ರನ್ ಗಳಿಸಿದರೆ, ಆಸ್ಟ್ರೇಲಿಯಾ ಕೇವಲ 119 ರನ್​ಗಳಿಗೆ ಆಲೌಟ್ ಆಯಿತು.

IND vs AUS: ಆಸೀಸ್ ವಿರುದ್ಧ 4ನೇ ಟಿ20 ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ ಭಾರತ
Team India

Updated on: Nov 06, 2025 | 6:07 PM

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ನಡೆದ ನಾಲ್ಕನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 48 ರನ್​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಪಡೆ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಹೆರಿಟೇಜ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆದ ಉಭಯ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 167 ರನ್ ಕಲೆಹಾಕಿತು. ತಂಡದ ಪರ ಶುಭ್​ಮನ್ ಗಿಲ್ (Shubman Gill) ಅತ್ಯಧಿಕ 46 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 119 ರನ್​ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 48 ರನ್​ಗಳ ಹೀನಾಯ ಸೋಲು ಅನುಭವಿಸಿತು.

ಸರಣಿಯಲ್ಲಿ ಭಾರತದ ಮೇಲುಗೈ

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿ ಸೋಲಿನಿಂದ ಪಾರಾಗಿದೆ. ಏಕೆಂದರೆ ಉಳಿದಿರುವ ಒಂದು ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸರಣಿ ಅದರ ಕೈಸೇರಲಿದೆ. ಒಂದು ವೇಳೆ ಸೋತರೆ ಸರಣಿ 2-2 ರಿಂದ ಸಮಬಲಗೊಳ್ಳಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಆ ಬಳಿಕ ನಡೆದಿದ್ದ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ನಂತರ ನಡೆದ ಮೂರನೇ ಟಿ20 ಪಂದ್ಯವನ್ನು 5 ವಿಕೆಟ್​ಗಳಿಂದ ಗೆದ್ದುಕೊಂಡಿದ್ದ ಸೂರ್ಯಕುಮಾರ್ ಪಡೆ, ಇದೀಗ ನಾಲ್ಕನೇ ಟಿ20 ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ದಾಖಲಿಸಿದೆ.

ಭಾರತಕ್ಕೆ ಕಳಪೆ ಆರಂಭ

ಗೋಲ್ಡ್ ಕೋಸ್ಟ್‌ನ ಕ್ಯಾರಾರಾ ಓವಲ್‌ನಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು. ಆದಾಗ್ಯೂ ಆತಿಥೇಯ ಆಸ್ಟ್ರೇಲಿಯಾಕ್ಕೆ ಟೀಂ ಇಂಡಿಯಾವನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು. ತಂಡದ ಪರ ಶುಭ್​ಮನ್ ಗಿಲ್ 46 ರನ್‌ ಬಾರಿಸಿದರಾದರೂ ಅವರ ಸ್ಟ್ರೈಕ್ ರೇಟ್ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಇತ್ತ ಕಳೆದ ಪಂದ್ಯದಲ್ಲಿ 25 ರನ್  ಬಾರಿಸಿದ್ದ ಅಭಿಷೇಕ್ ಶರ್ಮಾ, ಈ ಪಂದ್ಯದಲ್ಲಿಯೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಶಿವಂ ದುಬೆ ಕೂಡ 18 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು.

ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಭಾರತ

ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ ಹೊಡಿಬಡಿ ಆಟದ ಮೂಲಕ 10 ಎಸೆತಗಳಲ್ಲಿ 20 ರನ್ ಗಳಿಸಿದರಾದರೂ ಬೇಗನೇ ಔಟಾದರು. ತಿಲಕ್ ವರ್ಮಾ ಮತ್ತು ಜಿತೇಶ್ ಶರ್ಮಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅಲ್ಪ ಕಾಣಿಕೆ ನೀಡಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಆಸ್ಟ್ರೇಲಿಯಾ ಪರ, ನಾಥನ್ ಎಲ್ಲಿಸ್ ಕೇವಲ 21 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ, ಆಡಮ್ ಜಂಪಾ ಕೂಡ ಮೂರು ವಿಕೆಟ್‌ಗಳನ್ನು ಪಡೆದರು.

ಆಸೀಸ್​ಗೆ ಶಾಕ್ ನೀಡಿದ ಅಕ್ಷರ್, ದುಬೆ

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೂ ಸಾಧಾರಣ ಆರಂಭ ಸಿಕ್ಕಿತು. ಆದರೆ ಆರಂಭಿಕರು ಹೊಡಿಬಡಿ ಆಟದ ಮೂಲಕ ಉಳಿದವರಿಗೆ ಒತ್ತಡ ಕಡಿಮೆ ಮಾಡಿದರು. ಆದಾಗ್ಯೂ, ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಮಧ್ಯಮ ಓವರ್​ಗಳಲ್ಲಿ ಆಸೀಸ್ ಇನ್ನಿಂಗ್ಸ್​ಗೆ ಬ್ರೇಕ್ ಹಾಕಿದರು. ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಮತ್ತು ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಅವರನ್ನು ಔಟ್ ಮಾಡುವ ಮೂಲಕ ಅಕ್ಷರ್ ಮೊದಲ ಎರಡು ಹೊಡೆತಗಳನ್ನು ನೀಡಿದರು. ನಂತರ ದುಬೆ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಮೊದಲು ಅವರು ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಅವರನ್ನು ನಂತರ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರನ್ನು ಸುಲಭವಾಗಿ ಔಟ್ ಮಾಡಿದರು.

Big News: ಶಿಖರ್ ಧವನ್‌, ಸುರೇಶ್ ರೈನಾಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿ ಜಪ್ತಿ

3 ರನ್​ಗೆ 3 ವಿಕೆಟ್ ಪಡೆದ ಸುಂದರ್

ಅಲ್ಲಿಂದ ಆಸ್ಟ್ರೇಲಿಯಾದ ಪುನರಾಗಮನ ಹೆಚ್ಚು ಕಷ್ಟಕರವಾಯಿತು. 12 ನೇ ಓವರ್‌ನಲ್ಲಿ 91 ರನ್‌ಗಳಿಗೆ ಡೇವಿಡ್ ಸ್ಮಿತ್ ರೂಪದಲ್ಲಿ ಆಸ್ಟ್ರೇಲಿಯಾ ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ನಂತರ, ಮುಂದಿನ 28 ರನ್‌ಗಳಿಸುವ ವೇಳೆಗೆ ತಂಡದ ಉಳಿದ ಆರು ವಿಕೆಟ್‌ಗಳು ಪತನಗೊಂಡವು. ಅಂತಿಮವಾಗಿ ಆಸೀಸ್ ಪಡೆ 18.2 ಓವರ್‌ಗಳಲ್ಲಿ ಕೇವಲ 119 ರನ್‌ಗಳಿಗೆ ಪತನಗೊಂಡಿತು. ಭಾರತದ ಪರ ವಾಷಿಂಗ್ಟನ್ ಸುಂದರ್ ತಮ್ಮ ಎಂಟು ಎಸೆತಗಳ ಸ್ಪೆಲ್‌ನಲ್ಲಿ ಮೂರು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾದ ಇನ್ನಿಂಗ್ಸ್​ಗೆ ಬೇಗನೇ ಅಂತ್ಯ ಹಾಡಿದರು. ಸುಂದರ್ ಹೊರತುಪಡಿಸಿ ಅಕ್ಷರ್ 2, ದುಬೆ 2 ವಿಕೆಟ್ ಪಡದರೆ, ಅರ್ಷದೀಪ್, ಜಸ್ಪ್ರೀತ್ ಹಾಗೂ ವರುಣ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Thu, 6 November 25