Big News: ಶಿಖರ್ ಧವನ್, ಸುರೇಶ್ ರೈನಾಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿ ಜಪ್ತಿ
ED Seizes Shikhar Dhawan, Suresh Raina Assets: ಬೆಟ್ಟಿಂಗ್ ಆ್ಯಪ್ ಪ್ರಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಂದು ಆಘಾತ ನೀಡಿದೆ. 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ಇಬ್ಬರ ಒಟ್ಟು 11.14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ರೈನಾ ಮ್ಯೂಚುಯಲ್ ಫಂಡ್ ಹಾಗೂ ಧವನ್ ಸ್ಥಿರ ಆಸ್ತಿ ಸೇರಿವೆ.

ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಕ್ಕು ವಿಲವಿಲ ಎಂದು ಒದ್ದಾಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ (Shikhar Dhawan) ಹಾಗೂ ಸುರೇಶ್ ರೈನಾಗೆ (Suresh Raina) ಜಾರಿ ನಿರ್ದೇಶನಾಲಯ ಮತ್ತೊಂದು ಆಘಾತ ನೀಡಿದೆ. ಈ ಇಬ್ಬರು ಕ್ರಿಕೆಟಿಗರಿಗೆ ಸೇರಿರುವ ಒಟ್ಟು 11.14 ಕೋಟಿ ರೂ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಮುಟ್ಟುಗೋಲು ಹಾಕಿಕೊಂಡಿರುವ 11.14 ಕೋಟಿ ರೂ ಮೊತ್ತದಲ್ಲಿ ಸುರೇಶ್ ರೈನಾ ಅವರ ಹೆಸರಿನಲ್ಲಿರುವ 6.64 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಶಿಖರ್ ಧವನ್ ಅವರ ಹೆಸರಿನಲ್ಲಿರುವ 4.5 ಕೋಟಿ ರೂ ಮೌಲ್ಯದ ಸ್ಥಿರ ಆಸ್ತಿ ಸೇರಿವೆ.
ಶಿಖರ್ ಧವ್ನ ಹಾಗೂ ಸುರೇಶ್ ರೈನಾ ಇಬ್ಬರೂ ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ಅನ್ನು ಪ್ರಚಾರ ಮಾಡಿದ್ದಾರೆ ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಹಾಗೆಯೇ ಇವರಿಬ್ಬರು 1xBet ಮತ್ತು ಅದರ ಅಂಗಸಂಸ್ಥೆಗಳನ್ನು ಉತ್ತೇಜಿಸಲು ವಿದೇಶಿ ಸಂಸ್ಥೆಗಳೊಂದಿಗೆ ಗೊತ್ತಿದ್ದೂ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಇವರಿಬ್ಬರ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ತನಿಖೆಯಿಂದ ತಿಳಿದುಬಂದಿದ್ದೇನು?
1xBet ಪ್ಲಾಟ್‌ಫಾರ್ಮ್ ಭಾರತದಲ್ಲಿ ಸಾವಿರಾರು ನಕಲಿ ಬ್ಯಾಂಕ್ ಖಾತೆಗಳ ಮೂಲಕ ಹಣದ ವಹಿವಾಟು ನಡೆಸುತ್ತಿತ್ತು ಎಂಬುದು ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಇಲ್ಲಿಯವರೆಗೆ 6000 ಕ್ಕೂ ಹೆಚ್ಚು ನಕಲಿ ಖಾತೆಗಳು ಪತ್ತೆಯಾಗಿವೆ. ಈ ಖಾತೆಗಳ ಮೂಲಕ ವಿವಿಧ ಪಾವತಿ ಗೇಟ್‌ವೇಗಳ ಮೂಲಕ ಬೆಟ್ಟಿಂಗ್ ಹಣದ ನಿಜವಾದ ಮೂಲವನ್ನು ಮರೆಮಾಡಲಾಗಿದೆ. ಇದುವರೆಗೆ 1000 ಕೋಟಿ ರೂ. ಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.
Shikhar Dhawan’s Net Worth: ದುಬಾರಿ ಕಾರುಗಳು, ಐಷರಾಮಿ ಬಂಗಲೆ.. ಶಿಖರ್ ಧವನ್ ಎಷ್ಟು ಕೋಟಿಯ ಒಡೆಯ ಗೊತ್ತಾ?
ಸಾರ್ವಜನಿಕರಿಗೆ ಇಡಿ ಎಚ್ಚರಿಕೆ
ಇದೀಗ ಈ ಪ್ರಕರಣದಲ್ಲಿ ನಾಲ್ಕು ಪಾವತಿ ಗೇಟ್‌ವೇಗಳ ಮೇಲೆ ಇಡಿ ದಾಳಿ ನಡೆಸಿ 60 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದುವರೆಗೆ 4 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಯಾವುದೇ ರೀತಿಯ ಆನ್‌ಲೈನ್ ಬೆಟ್ಟಿಂಗ್ ಅಥವಾ ಜೂಜಾಟ ಪ್ರಚಾರ ಅಥವಾ ಹೂಡಿಕೆಯಿಂದ ದೂರವಿರುವಂತೆ ಇಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟವು ಆರ್ಥಿಕ ನಷ್ಟವನ್ನು ಉಂಟುಮಾಡುವುದಲ್ಲದೆ, ಹಣ ವರ್ಗಾವಣೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಇಡಿ ಹೇಳಿದೆ. ಯಾವುದೇ ಅನುಮಾನಾಸ್ಪದ ಆನ್‌ಲೈನ್ ಜಾಹೀರಾತುಗಳು ಅಥವಾ ವಹಿವಾಟುಗಳು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರು ಅಥವಾ ಇಡಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Thu, 6 November 25
