IND vs AUS, WTC Final: ಭಾರತ-ಆಸ್ಟ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಮೂರೇ ದಿನ ಬಾಕಿ
IND vs AUS, WTC Final: ವಿಶೇಷ ಎಂದರೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾದರೆ ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಮಾಡಲಾಗದ ಅಪರೂಪದ ದಾಖಲೆಯೊಂದನ್ನು ಬರೆಯಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2023) ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 7 ರಿಂದ 11 ರ ವರೆಗೆ ಈ ಮಹತ್ವದ ಪಂದ್ಯ ನಡೆಯಲಿದ್ದು, ಇನ್ನು ಕೇವಲ ಮೂರು ದಿನವಷ್ಟೇ ಬಾಕಿಯಿದೆ. ಈಗಾಗಲೇ ಉಭಯ ತಂಡಗಳು ತಯಾರಾಗುತ್ತಿದೆ. ಲಂಡನ್ನ ಪ್ರತಿಷ್ಠಿತ ಕೆನ್ನಿಂಗ್ಟನ್ ಓವಲ್ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಟೀಮ್ ಇಂಡಿಯಾದ (Team India) ಎಲ್ಲ ಆಟಗಾರರು ಲಂಡನ್ನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಸೇರಿದ್ದು ಅಭ್ಯಾಸ ನಡೆಸುತ್ತಿದ್ದಾರೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ವಿಶೇಷ ಎಂದರೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾದರೆ ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಮಾಡಲಾಗದ ಅಪರೂಪದ ದಾಖಲೆಯೊಂದನ್ನು ಬರೆಯಲಿದೆ. ಆಸೀಸ್ ವಿರುದ್ಧ ಭಾರತ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದರೆ, ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಮಾದರಿಗಳಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ತದ್ವಿರುದ್ಧವಾಗಿ ಆಸ್ಟ್ರೇಲಿಯಾ ಗೆದ್ದರೆ, ಆಸ್ಟ್ರೇಲಿಯಾ ಕೂಡ ಇದೇ ದಾಖಲೆ ಬರೆಯಲಿದೆ. ಜೊತೆಗೆ ಭಾರತ ತಂಡ 2013ರ ಬಳಿಕ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ಬರವನ್ನು ನೀಗಿಸಿಕೊಳ್ಳಿದೆ. ವಾಸ್ತವವಾಗಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆದರೆ ಆ ಬಳಿಕ ಭಾರತಕ್ಕೆ ಐಸಿಸಿ ಟ್ರೋಫಿ ಬಂದಿಲ್ಲ.
WTC Final 2023: ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೆಸರಿಸಿದ ಟಾಮ್ ಮೂಡಿ
ಐದು ದಿನಗಳ ಕಾಲ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾದರು ಈ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡರೆ WTC 2021-23 ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಪ್ರಶಸ್ತಿ ನೀಡಲಾಗುವುದಿಲ್ಲ. ಐಸಿಸಿ ನಿಯಮಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ, ಎರಡೂ ತಂಡಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.
ಒಂದುವೇಳೆ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಕಳೆದ ವರ್ಷದ ಆವೃತ್ತಿಯಂತೆ, ಮಳೆ ಬಂದ ಸಮಯವನ್ನು ಸರಿದೂಗಿಸಲು ಮೀಸಲು ದಿನವನ್ನು ಇರಿಸಲಾಗಿದೆ. ಆದರೆ ಇದಕ್ಕೂ ನಿಯಮವಿದೆ. ಪ್ರತಿ ಟೆಸ್ಟ್‌ನ ಆಟದ ಸಮಯವು 30 ಗಂಟೆಗಳು. ಅಂದರೆ ದಿನಕ್ಕೆ ಆರು ಗಂಟೆ ಅಥವಾ ದಿನಕ್ಕೆ 90 ಓವರ್‌ಗಳು ಇರುತ್ತದೆ. ನಿಗದಿತ ಆರು ಗಂಟೆಗಳ ಸಮಯವನ್ನು ಪೂರೈಸದಿದ್ದರೆ ಅಥವಾ ದಿನಕ್ಕೆ 90 ಓವರ್‌ಗಳ ಪೂರ್ಣ ಕೋಟಾವನ್ನು ಪೂರ್ಣಗೊಳಿಸದಿದ್ದರೆ ಮಾತ್ರ ಮೀಸಲು ದಿನವು ಜಾರಿಗೆ ಬರುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ಟೆಲಿವಿಷನ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಡಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಸ್ ಭರತ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕಟ್.
ಮೀಸಲು ಆಟಗಾರರು: ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಮುಖೇಶ್ ಕುಮಾರ್
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್ ಮತ್ತು ಮ್ಯಾಥ್ಯೂ ರೆನ್ಶಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ