ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವು ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಈ ಟೆಸ್ಟ್ ಪಂದ್ಯದ ನಾಲ್ಕು ದಿನದಾಟಗಳು ಮುಕ್ತಾಯವಾಗಿದ್ದು, ಇದೀಗ ಸೋಲು ಗೆಲುವನ್ನು ನಿರ್ಣಯಿಸಲು ಇನ್ನೊಂದು ದಿನ ಬಾಕಿ ಇದೆ. ಈ ಕೊನೆಯ ದಿನದಲ್ಲಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಏಕೆಂದರೆ ಕೊನೆಯ ದಿನದಲ್ಲಿ ಟೀಂ ಇಂಡಿಯಾ 300 ಕ್ಕೂ ಅಧಿಕ ರನ್‌ಗಳನ್ನು ಬೆನ್ನಟ್ಟ ಬೇಕಾಗಿದೆ. ಅದರಲ್ಲೂ ಆಸೀಸ್ ತಂಡದ ಬಲಿಷ್ಠ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವುದು ಟೀಂ ಇಂಡಿಯಾಕ್ಕೆ ಸವಾಲಿನ ಕೆಲಸವಾಗಿದೆ. ಆದಾಗ್ಯೂ ಈ ಹಿಂದೆ ಇದೇ ಮೈದಾನದಲ್ಲಿ ಗುರಿ ಬೆನ್ನಟ್ಟಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಮತ್ತದೆ ಸಾಧನೆಯನ್ನು ಪುನರಾವರ್ತಿಸಲಿ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.
ಅಷ್ಟಕ್ಕೂ ಮೆಲ್ಬೋರ್ನ್‌ನಲ್ಲಿ ಇದುವರೆಗೆ ಯಶಸ್ವಿಯಾಗಿ ಬೆನ್ನಟ್ಟಿರುವ ಬೃಹತ್ ಮೊತ್ತ ಎಷ್ಟು ಎಂಬುದನ್ನು ಹುಡುಕಾಟ ನಡೆಸಿದಾಗ ನಮಗೆ ಸಿಕ್ಕಿದ್ದು, 1928 ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ. ಈ ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ 322 ರನ್‌ಗಳ ಗುರಿ ಇತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದ ಇಂಗ್ಲೆಂಡ್, ಆಸ್ಟ್ರೇಲಿಯಾವನ್ನು ಸೋಲಿಸಿತ್ತು.
ಇನ್ನೊಂದು ಬಾರಿಯೂ ಇಂಗ್ಲೆಂಡ್ 297 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಆಸೀಸ್ ವಿರುದ್ಧ ಗೆಲುವು ಸಾಧಿಸಿದ್ದರೆ, ಇತ್ತ ದಕ್ಷಿಣ ಆಫ್ರಿಕಾ ಕೂಡ ಈ ಮೈದಾನದಲ್ಲಿ 295 ರನ್‌ಗಳನ್ನು ಬೆನ್ನಟ್ಟಿ ಗೆಲುವು ದಾಖಲಿಸಿದೆ. ಇದಲ್ಲದೆ ಇನ್ನೂ ಎರಡು ಬಾರಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ನೀಡಿದ 286 ಹಾಗೂ 282 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಸಾಧಿಸಿರುವುದರಿಂದ ಇದೀಗ ಟೀಂ ಇಂಡಿಯಾ ಮುಂದಿರುವ ಸವಾಲು ಕೂಡ ದೊಡ್ಡದಲ್ಲ ಎಂಬುದನ್ನು ನಾವೆಲ್ಲ ಊಹಿಸಬಹುದು. ಆದಾಗ್ಯೂ ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಬೇಕಾದರೆ ತಂಡದ ಬ್ಯಾಟಿಂಗ್ ವಿಭಾಗ ಈ ಪಂದ್ಯದಲ್ಲಾದರೂ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ.
ಇದಕ್ಕೆ ಪೂರಕವಾಗಿ ಟೀಂ ಇಂಡಿಯಾ ಕೂಡ ಒಂದು ಬಾರಿ ಇದೇ ಮೈದಾನದಲ್ಲಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿರುವ ಕಾರಣ ಈ ಟಾರ್ಗೆಟ್ ರೋಹಿತ್ ಪಡೆಗೆ ಸವಾಲಾಗದು ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ವಾಸ್ತವವಾಗಿ 2020ರಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾ 70 ರನ್‌ಗಳ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು ಬೆನ್ನಟ್ಟಿತ್ತು. ಇದೀಗ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾ ಮತ್ತೆ ಗೆಲುವಿನ ದಡ ಮುಟ್ಟಲಿ ಎಂಬುದು ಎಲ್ಲರ ಆಶಯವಾಗಿದೆ.